ಕೂಡಿಗೆ, ಸೆ. 7: ಕಾವೇರಿ ನೀರಾವರಿ ನಿಗಮ ನಿಯಮಿತ, ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಾರಂಗಿ ಯೋಜನೆ ಯಡಿಯಲ್ಲಿ 2020ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಬೆಂಗಳೂರಿನಲ್ಲಿ ನೆಡೆಯಿತು. ಸಭೆಯ ತೀರ್ಮಾನದಂತೆ ಹಾರಂಗಿ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಮುಖ್ಯ ನಾಲೆಯ ಮೂಲಕ ನೀರು ಹರಿಸುವ ಯೋಜನೆಯಲ್ಲಿ ತಾ. 9 ರಿಂದ 18ರ ವರೆಗೆ ಮುಖ್ಯ ನಾಲೆಯ ನೀರನ್ನು ಸ್ಥಗಿತಗೊಳಿಸಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ತಾ. 9 ರಿಂದ 18ರ ವರೆಗೆ ನೀರು ನಿಲ್ಲಿಸುವುದು, ತಾ. 19 ರಿಂದ ಅ. 8ರ ವರೆಗೆ 20 ದಿನಗಳ ಕಾಲ ನೀರು ಹರಿಸುವುದು. ನಂತರ ಅ. 9 ರಿಂದ 18ರ ವರೆಗೆ ನೀರು ನಿಲ್ಲಿಸಲಾಗುವುದು. ನಂತರ 20 ದಿನಗಳಲ್ಲಿ ಮತ್ತೆ ನಾಲೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ.