ಸಿದ್ದಾಪುರ, ಸೆ. 5: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಅಮ್ಮತ್ತಿ ವ್ಯಾಪ್ತಿಯಲ್ಲಿ ಇದೀಗ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಮ್ಮತ್ತಿ, ಕಾವಾಡಿ ಹಾಗೂ ಅಮ್ಮತ್ತಿಯ ಕೊಡವ ಸಮಾಜದ ಸುತ್ತಮುತ್ತಲ ಪ್ರದೇಶದ ಕಾಫಿ ತೋಟಗಳಲ್ಲಿ ಹುಲಿಯೊಂದು ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿತು. ಇದಲ್ಲದೆ ಇಂಜಿಲಗೆರೆ ಪುಲಿಯೇರಿ ಗ್ರಾಮದಲ್ಲಿ ಕೂಡ ಇತ್ತೀಚೆಗೆ ಹುಲಿ ಹೆಜ್ಜೆ ಗುರುತುಗಳು ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ ಕಾರ್ಮಿಕರು ಭಯಗೊಂಡು ಕೆಲಸದಿಂದ ಹಿಂತಿರುಗಿ ಬಂದಿದ್ದರು. ಹುಲಿ ಹೆಜ್ಜೆ ಗುರುತು ಕಂಡು ಬಂದಿದ್ದ ಸ್ಥಳಗಳಿಗೆ ವೀರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಮೂರು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿ ಓಡಾಡುತ್ತಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಈ ಬಗ್ಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ,