ಐದೂವರೆ ದಶಕದ ಹಿಂದೆ (1965) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಅಮರ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಯನ್ನು ಮಂಜಿನನಗರಿ ಮಡಿಕೇರಿಯ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ವೀರಯೋಧನಿಗೆ ಗೌರವ ನೀಡಲಾಗುತ್ತಿದೆ. ಕೊಡವ ಮಕ್ಕಡ ಕೂಟ ಹಾಗೂ ಇತರರ ಎಂಟು ವರ್ಷಗಳ ಪರಿಶ್ರಮಕ್ಕೆ ಈ ಮೂಲಕ ಫಲಸಿಕ್ಕಂತಾಗಲಿದೆ.

ಸೇನಾಪರಂಪರೆಯ ಇತಿಹಾಸದಲ್ಲಿ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪ್ರಶಸ್ತಿ ಮರಣೋತ್ತರವಾಗಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರಿಗೆ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ನಿವೃತ್ತ ಜೀವನ ನಡೆಸುತ್ತಿರುವ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಅವರು ಈ ಗೌರವಯುತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಡವ ಮಕ್ಕಡ ಕೂಟ, ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಅಜ್ಜಮಾಡ ಕುಟುಂಬದ ಜಂಟಿ ಆಶ್ರಯದಲ್ಲಿ ಈ ಪ್ರತಿಮೆಯ ಅನಾವರಣ ಅವರು ಹುತಾತ್ಮರಾದ ಸೆ. 7 ರಂದು ನಡೆಯುತ್ತಿದೆ.

ಕೊಡಗಿನ ಕೇಂದ್ರಸ್ಥಾನ ಮಡಿಕೇರಿಗೆ ಮೈಸೂರಿನಿಂದ ಬರುವಾಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ, ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ, ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ, ಹುತಾತ್ಮ ಯೋಧ ಮಂಗೇರಿರ ಮುತ್ತಣ್ಣ ಪ್ರತಿಮೆಯ ಜೊತೆಗೆ ಇದೀಗ ಮಹಾವೀರಚಕ್ರ ಸೇನಾಬಿರುದು ಪಡೆದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆ ಮಡಿಕೇರಿಯ ಹೃದಯ ಭಾಗದಲ್ಲಿ ಅಜರಾಮರಗೊಳ್ಳಲಿದೆ.

ಕ್ಷಾತ್ರಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗನ್ನೆಲ್ಲ ತೊರೆದು ಶತ್ರುಗಳೊಂದಿಗೆ ಹೋರಾಡಿ ವೀರ ಮರಣವನಪ್ಪಿ 55 ವರ್ಷಗಳೇ ಕಳೆದು ಹೋದ ವೀರಪರಂಪರೆಯ ಐತಿಹ್ಯ ವೀರಸೇನಾನಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯರದ್ದು.

ಅಂದು 1965ನೇ ಇಸವಿ ಭಾರತ-ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ತಮ್ಮ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಹೊರಟ ದೇವಯ್ಯ ತಂಡಕ್ಕೆ ಶತ್ರುಗಳ ವಾಯು ನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿಸಾಧಿಸಿ ಹಿಂತಿರುಗಿ ಬರುವ ಎಲ್ಲ ಅವಕಾಶಗಳಿದ್ದರೂ ತಮ್ಮ ತಂಡದ ಇತರ ಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ಸುರಕ್ಷಿತವಾಗಿ ಹಿಂತಿರುಗುತಿದ್ದಂತೆ ದಿಢೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗಿತ್ತು.

ಎದೆಗುಂದದ ದೇವಯ್ಯ ಪ್ರಾಣದ ಹಂಗುತೊರೆದು ತನ್ನದೇ ಆದ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂಸೇನಾ ಸೈನಿಕರು ಮುಖಾಮುಖಿ ಹೇಗೆ ಹೋರಾಡುತಾರೋ ಅದೇ ರೀತಿ ವಾಯೂ ಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವಾದ ‘ಡಾಗ್ ಫೈಟನ್ನು’ ಕೆಚ್ಚೆದೆಯಿಂದ ಎದುರಿಸಬೇಕಿತ್ತು. ಯುದ್ಧ ವಿಮಾನಗಳು ಪರಸ್ಪರ ಡೈ ಹೊಡೆಯುತ್ತಾ ಬಹುಹೊತ್ತಿನವರೆಗೆ ದಾಳಿ ಮುಂದುವರಿಯಿತು. ದೇವಯ್ಯ ತನ್ನ ವಿಮಾನದಿಂದ ಸ್ಟಾರ್‍ಫೈಟರ್‍ಗೆ ತೀವ್ರ ಹಾನಿ ಮಾಡಿದರು. ಶತ್ರುಗಳ ಬಲಿಷ್ಠವಾದ ಸೂಪರ್‍ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ದೇವಯ್ಯನವರ ವಿಮಾನಕ್ಕೂ ಧಕ್ಕೆಯಾಯಿತು. ಆ ಸಂದರ್ಭ ತಾನೂ ಕೂಡ ಪ್ಯಾರಚೂಟ್‍ನಲ್ಲಿ ಹಾರುವ ಅವಕಾಶವಿತ್ತು. ಆದರೆ ತಾನಿರುವ ಶತ್ರುವಿನ ನೆಲದಲ್ಲಿ ಇಳಿದರೆ ಸೆರೆಯಾಗಿ ತಲೆತಗ್ಗಿಸಲು ಈ ಕೊಡಗಿನ ಮಹಾವೀರನಿಗೆ ಮನಸಾಗಿಲಿಕಿಲ್ಲವೋ ಅಥವಾ ಅದಾಗಲೇ ಹೊತ್ತಿ ಉರಿಯುತಿದ್ದ ವಿಮಾನದಿಂದ ಹೊರಜಿಗಿಯಲು ಸಾಧ್ಯವಾಗಿಲ್ಲವೋ ತಾನಿದ್ದ ಯುದ್ಧ ವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ತಮ್ಮ ದೇಶಕಾಗಿ ಪ್ರಾಣತ್ಯಾಗ ಮಾಡಿ ಅಮರದಾದರು. 1965ರ ಸೆಪ್ಟಂಬರ್ 7 ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೇರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿಯೇ ಬಿಟ್ಟರು. ದೇವಯ್ಯ ಅಮರ್ ರಹೇ... ಎಂಬ ಕೂಗು ಜಗತ್ತಿಗೆ ತಿಳಿಯಲು ಸಾಕಷ್ಟು ವರ್ಷಗಳೇ ಕಳೆದುಹೋಯಿತು. 23 ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರು ದೇಶದ ಪೈಲೇಟ್ ಒಬ್ಬ ವಿವರಿಸಿದ್ದು, ಬ್ರಿಟಿಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕೃತಿಯಲ್ಲೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಧನೆ ಹಾಗೂ ಹೋರಾಟ ಅಪ್ರತಿಮವಾದದ್ದೆಂದು ದಾಖಲಾಗಿದೆ.

ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ-ನೀಲಮ್ಮ ದಂಪತಿಗಳ ಪುತ್ರ ದೇವಯ್ಯ 1954ರ ತನ್ನ 22ರ ಹರೆಯದಲ್ಲಿ ಸೇನೆಗೆ ಸೇರಿ ತಮ್ಮ 11 ವರ್ಷದ ಸೇನಾ ಜೀವನದಲ್ಲಿ ದೇಶ ಸೇವೆಯಲ್ಲಿ ಅಸಾಮಾನ್ಯ ಸಾಹಸ, ಎದೆಗಾರಿಕೆ ತ್ಯಾಗ ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯ ಅವರಿಗೆ 1988 ರಲ್ಲಿ ವiಹಾ ವೀರಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ದಿ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.

1965 ಯುದ್ಧ ಹಾಗೂ ಕೊಡಗಿನ ಮಹಾವೀರ ಕೃತಿಯನ್ನು ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ್ದಾರೆ. ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬ ಈ ಕೃತಿಯನ್ನು 2017 ರ ಸೆಪ್ಟಂಬರ್ 7 ರಂದು ಅನಾವರಣಗೊಳಿಸಿತ್ತು. 2018 ಫೆಬ್ರವರಿ 15 ರಂದು ದ್ವಿತೀಯ ಮುದ್ರಣ ಮಾಡಲಾಗಿದೆ.

ಎಂಟು ವರ್ಷಗಳ ಹಿಂದೆ ಮಡಿಕೇರಿಯ ಕೇಂದ್ರ ಬಿಂದುವಾದ ಹಳೆಯ ಬಸ್ ನಿಲ್ದಾಣದ ಮುಂದಿರುವ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ವೃತ್ತಕ್ಕೆ ವಾಹನವೊಂದು ಅಪ್ಪಳಿಸಿ ಹಾನಿಮಾಡಿತ್ತು ಆ ಸಮಯದಲ್ಲಿ ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಬೊಳ್ಳಜಿರ ಬಿ. ಅಯ್ಯಪ್ಪ ತನ್ನ ತಂಡದೊಂದಿಗೆ ವೃತ್ತವನ್ನು ದುರಸ್ತಿಗೊಳಿಸಿದರು. ಅಲ್ಲಿಂದ ಪ್ರತೀವರ್ಷ ವೀರ ಮರಣವನಪ್ಪಿದ ಸೆಪ್ಟಂಬರ್7 ರ ದಿನವನ್ನು ಕೊಡವ ಮಕ್ಕಡ ಕೂಟ ಹಾಗು ಅಜ್ಜಮಾಡ ಕುಟುಂಬದ ಸಹಯೋಗದಲ್ಲಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ಸ್ಮರಣಾ ದಿನವನ್ನು ಆಚರಿಸುವ ಮೂಲಕ ವೀರಯೋಧನಿಗೆ ಗೌರವ ಸಲ್ಲಿಸುತ್ತಾ ಬರುತ್ತಿದ್ದಾರೆ. ಸಾಕಷ್ಟು ಪ್ರಯತ್ನಗಳ ಬಳಿಕ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯ ಮುಗಿದಿದ್ದು, ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಕೊಡಗಿನ ವೀರ ಯೋಧನಿಗೆ ಗೌರವ ಸಲ್ಲಿಸುವ ಕ್ಷಣವಾಗಲಿದೆ.

- ಪುತ್ತರಿರ ಕರುಣ್ ಕಾಳಯ್ಯ