ವೀರಾಜಪೇಟೆ, ಸೆ. 4 : ವೀರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಲ್ಲಿ ಹೊಡೆದಾಟದ ಕ್ರಿಮಿನಲ್ ಪ್ರಕರಣದಲ್ಲಿ 42 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬಬ್ಬೀರ ಲಾಲ ಎಂಬಾತನನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ನಿನ್ನೆ ರಾತ್ರಿ ಬಂಧಿಸಿ ಇಂದು ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಕಳೆದ 1978 ರಲ್ಲಿ ಕಂಡಂಗಾಲ ಗ್ರಾಮದ ಒಕ್ಕಲಿಗರ ನಾಣಯ್ಯ ಎಂಬುವರ ಮೇಲೆ ಬಬ್ಬೀರ ಲಾಲ ಹಾಗೂ ಅವರ ತಂದೆ ಉತ್ತಪ್ಪ ಹಲ್ಲೆ ನಡೆಸಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ತಂದೆ, ಮಗ ಇಬ್ಬರು ತಲೆ ಮರೆಸಿಕೊಂಡಿದ್ದರು. ಉತ್ತಪ್ಪ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಲಾಲ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು ನಿನ್ನೆ ದಿನ ಕೈಲ್ ಮುಹೂರ್ತದ ಹಬ್ಬದ ಆಚರಣೆಗೆ ಬಂದಿದ್ದಾಗ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿ ಬಂಧಿಸಿದ್ದಾರೆ.

ವೀರಾಜಪೇಟೆ ಉಪವಿಭಾಗದ ಉಪಾಧೀಕ್ಷಕ ಜಯಕುಮಾರ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಪ್ರಬಾರ ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ವೀಣಾ ನಾಯಕ್, ಗೋಣಿಕೊಪ್ಪ ಠಾಣಾ ಎಎಸ್‍ಐ ಎಂ.ಎಸ್. ಸುಬ್ರಮಣಿ, ವೀರಾಜಪೇಟೆ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಬಿ.ಎಂ. ರಾಮಪ್ಪ, ಎಂ.ಎಸ್. ರಾಮಣ್ಣ ನಾಯಕ್, ವೀರಾಜಪೇಟೆ ನಗರ ಠಾಣಾ ಸಿಬ್ಬಂದಿ ಮುನಿರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.