ಮುಳ್ಳೂರು, ಸೆ. 4: ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2019-20ನೇ ಸಾಲಿನಲ್ಲಿ ಮಾಡಿದ್ದ ಸಾಲವನ್ನು ಸರಕಾರ ಮನ್ನಾ ಮಾಡಲು ಆದೇಶ ನೀಡಿದ್ದರೂ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಹಳಷ್ಟು ರೈತರ ಸಾಲ ಮನ್ನಾ ಬಾಕಿಯಾಗಿದೆ ಎಂದು ಹಂಡ್ಲಿ ವ್ಯಾಪ್ತಿಯ ರೈತ ಕೆ.ಸಿ. ಪುಟ್ಟಪ್ಪ ಸಾಲ ಮನ್ನಾ ರೈತರ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ರೈತರ ಸಾಲ ಮನ್ನಾ ಯೋಜನೆಯಡಿಯಲ್ಲಿ ಇನ್ನೂ 73 ಸದಸ್ಯರಿಗೆ ಸಾಲ ಮನ್ನಾ ಆಗಿರುವುದಿಲ್ಲ ಎಂದರು. ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಂಬಂಧಿಸಿದ ಸಾಲ ಮನ್ನಾ ಯೋಜನೆಯ ಆನ್‍ಲೈನ್ ತಂತ್ರಾಂಶವನ್ನು ಪರಿಶೀಲಿಸಿದಾಗ 73 ಸದಸ್ಯರಿಗೆ ಇನ್ನೂ ಸಾಲ ಮನ್ನಾ ಆಗದಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ. ಸರಕಾರದಿಂದ ರೈತರ ಸಾಲ ಮನ್ನಾ ಬಾಕಿ ಇರುವ ಕುರಿತು ಜಿಲ್ಲಾಧಿಕಾರಿಗಳಿಗೆ, ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸಾಲ ಮನ್ನಾ ಆಗದಿರುವ ರೈತರ ಪರವಾಗಿ ಹಂಡ್ಲಿ ಪ್ರಾ.ಕೃ.ಪ.ಸ. ಸಂಘದ ಆಡಳಿತ ಮಂಡಳಿ 1.1.2020 ರಂದು ಮನವಿ ಪತ್ರ ನೀಡಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಉಪ ನಿಬಂಧಕರು ಮನವಿಗೆ ಸ್ಪಂದಿಸಿ ಹಂಡ್ಲಿ ವ್ಯಾಪ್ತಿಯಲ್ಲಿ ಸಾಲ ಮನ್ನಾ ಆಗಿರುವ ಕುರಿತು ಆನ್‍ಲೈನ್ ದಾಖಲಾತಿ ಪತ್ರವನ್ನು ಹಂಡ್ಲಿ ಸಂಘಕ್ಕೆ ಕಳಿಸಿಕೊಟ್ಟಿದ್ದಾರೆ. ಆದರೆ ಆನ್‍ಲೈನ್ ದಾಖಲಾತಿ ಪತ್ರದಲ್ಲಿ ಕೆಲವು ರೈತರನ್ನು ಗ್ರೀನ್‍ಲೀಸ್ಟ್‍ಗೆ ಒಳಪಡಿಸಿದ್ದರೂ ಬಹಳಷ್ಟು ಫಲಾನುಭವಿಗಳನ್ನು ಗ್ರೀನ್‍ಲಿಸ್ಟ್‍ಗೆ ಒಳಪಡಿಸಿಲ್ಲ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಸರಕಾರ ಹಂಡ್ಲಿ ವ್ಯಾಪ್ತಿಯಲ್ಲಿ 73 ಸದಸ್ಯರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. - ಭಾಸ್ಕರ್ ಮುಳ್ಳೂರು.