ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ, ಖಾಸಗಿ ಏಜೆನ್ಸಿಗಳು ಸಂಬಳ ಪಾವತಿ ಮಾಡದಿರಲು, ಸರಕಾರದಿಂದ ಹಣ ಬಿಡುಗಡೆಯಾಗದೆ ಸಮಸ್ಯೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟನೆ ನೀಡಿದ್ದಾರೆ. ಅನೇಕ ಉದ್ಯೋಗಿಗಳಿಗೆ ನಾಲ್ಕಾರು ತಿಂಗಳು ವೇತನ ಪಾವತಿಯಾಗದಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಸರಕಾರದಿಂದ ಏಜೆನ್ಸಿಗಳಿಗೆ ವಿಧಿಸಿರುವ ಷರತ್ತುಗಳಿಗೆ ಅನುಸಾರವಾಗಿ, ಒಂದೆರಡು ತಿಂಗಳಿನ ಸಂಬಳವನ್ನು ಏಜೆನ್ಸಿಗಳು ಪಾವತಿಸುತ್ತಿದ್ದು, ಅದು ಮತ್ತಷ್ಟು ಅವಧಿಗೆ ವಿಸ್ತರಣೆಯೊಂದಿಗೆ ಹಣ ಬಿಡುಗಡೆಯಾಗದಿದ್ದರೆ ಸಂಬಂಧಿಸಿದ ಏಜೆನ್ಸಿಗಳು ಸರಕಾರದ ಹಣ ಜಮೆಗೊಳ್ಳುವ ತನಕ ವೇತನ ಪಾವತಿಗೆ ಕಾಯಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲದೆ ಏಜೆನ್ಸಿಗಳು ಸರಕಾರದ ಒಡಂಬಡಿಕೆಯಂತೆ ಸೀಮಿತ ಕಾಲಮಿತಿಗೆ ಒಳಪಟ್ಟು, ಸಾಮಥ್ರ್ಯಕ್ಕೆ ತಕ್ಕಷ್ಟೇ ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳಲಿವೆ. ಈ ಸಿಬ್ಬಂದಿ ಏಜೆನ್ಸಿಗಳ ನಿಯಮದಂತೆ ಹೆಚ್ಚುವರಿ ಕೆಲಸ ಕಾರ್ಯಗಳನ್ನು ದೈನಂದಿನ ವ್ಯವಸ್ಥೆಯಲ್ಲಿ ನಿರ್ವಹಿಸಬೇಕೆಂದು ಅವರು ಪ್ರತಿಪಾದಿಸಿದರು.
ಕಾರಣ ತಿಳಿದಿಲ್ಲ : ಸರಕಾರದಿಂದ ವಿವಿಧ ಏಜೆನ್ಸಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿರುವ ಕುರಿತು ಕಾರಣ ತಿಳಿದಿಲ್ಲ ಎಂದು ನುಡಿದ ಜಿಲ್ಲಾಧಿಕಾರಿಗಳು, ಆಯಾ ಏಜೆನ್ಸಿಯಡಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ಮಾಡದಿದ್ದರೆ ಮಾತ್ರ ತೆಗೆದು ಹಾಕಿರುವ ಒಂದೆರಡು ಪ್ರಕರಣಗಳು ನಡೆದಿವೆ ಎಂಬದಾಗಿ ಮಾರ್ನುಡಿದರು.
ನೌಕರರ ಆತಂಕ : ಆದರೆ ಹೊರಗುತ್ತಿಗೆ ವ್ಯವಸ್ಥೆಯಡಿ ಬೇರೆ ಬೇರೆ ಏಜೆನ್ಸಿಗಳಿಂದ ಆರೆಂಟು ತಿಂಗಳ ವೇತನ ಪಾವತಿಯಾಗದೆ ಅತಂತ್ರಗೊಂಡಿರುವ ಸಿಬ್ಬಂದಿಗಳು ಮಾತ್ರ, ತಮಗೆ ವರ್ಷದ ಆರು ತಿಂಗಳು ದುಡಿಮೆಯ ಸಂಭಾವನೆಯೊಂದಿಗೆ ಭವಿಷ್ಯದ ಬಗ್ಗೆ ಆತಂಕ ತೋಡಿಕೊಂಡಿದ್ದಾರೆ.
ಬದಲಿ ಏಜೆನ್ಸಿ : ಈವರೆಗೆ ವಿವಿಧ ಏಜೆನ್ಸಿಗಳಿಂದ ಸಂಬಳ ತಡೆಹಿಡಿಯಲ್ಪಟ್ಟಿರುವ ಬೆನ್ನಲ್ಲೇ, ಇದೇ ತಾ. 1 ರಿಂದ ಮರು ಟೆಂಡರ್ ಪ್ರಕ್ರಿಯೆ ಮೂಲಕ ಸರಕಾರದ ಹಂತದಲ್ಲಿ ಏಜೆನ್ಸಿಗಳು ಬದಲಾವಣೆಗೊಳ್ಳುತ್ತಿರುವ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಕೊಡಗು ಲೋಕೋಪಯೋಗಿ ಇಲಾಖಾ ಕಚೇರಿ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಸಹಿತ ತೀರಾ ಕೆಳಹಂತದ ನೌಕರರ ಸಮಸ್ಯೆ ಹಾಗೂ ಏಜೆನ್ಸಿಗಳಿಂದ ಮಾಸಿಕ ವೇತನ ಕಾಲಕಾಲಕ್ಕೆ ಪಾವತಿಯಾಗದಿರುವ ಕುರಿತು ಮೇಲಧಿಕಾರಿಗಳು ನಿರ್ಲಕ್ಷ್ಯ ತಳೆದಿದ್ದಾರೆ ಎಂದು ‘ಶಕ್ತಿ’ ಯೊಂದಿಗೆ ನೋವು ತೋಡಿಕೊಂಡಿದ್ದಾರೆ.