ಮಡಿಕೇರಿ, ಸೆ. 4: ಮಡಿಕೇರಿ ನಗರದ ಹಿತದೃಷ್ಟಿಯಿಂದ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕಾಗಿದ್ದು, ಈ ದಿಸೆಯಲ್ಲಿ ತಾನು ನಗರಸಭೆ ಆಯುಕ್ತರೊಂದಿಗೆ, ಮೂಡಾ ಆಯುಕ್ತರೊಂದಿಗೆ ಚರ್ಚಿಸಿ ಮುಂದಡಿ ಇಡುತ್ತೇನೆ ಎಂದು ಮಡಿಕೇರಿ ನರಗಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ರಮೇಶ್ ಹೊಳ್ಳ ಹೇಳಿದರು.

ನಗರವು ಬೆಟ್ಟಗುಡ್ಡ ಸಹಿತ ಪ್ರಾಕೃತಿಕ ರಮಣೀಯ ಪ್ರದೇಶವಾಗಿದೆ. ಪ್ರಾಕೃತಿಕ ಸಹಜ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ನನ್ನ ಆದ್ಯತೆಯಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯಾವುದೇ ಕಾರ್ಯ ನಡೆಸುವ ಬಗ್ಗೆ ಮುತುವರ್ಜಿ ವಹಿಸುವುದಾಗಿ ಅವರು ಖಚಿತಪಡಿಸಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮಡಿಕೇರಿ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಸೂಕ್ತ ಜಾಗವಿಲ್ಲ. ಆದರೂ 25 ಎಕರೆ ಖಾಸಗಿ ಜಾಗವೊಂದನ್ನು ತಾನು ನೋಡಿದ್ದು, ಆ ಸ್ಥಳವನ್ನು ಮೂಡಾಕ್ಕೆ ಒದಗಿಸುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಲಿದ್ದೇನೆ. ಅದು ಮಂಜೂರಾದರೆ ಕಾನೂನಿನ ಇತಿಮಿತಿಯೊಳಗೆ ಬಡಾವಣೆ ನಿರ್ಮಾಣಕ್ಕೆ ಮುಂದಾಗುವುದಾಗಿ ನುಡಿದರು. ನಗರ ವ್ಯಾಪ್ತಿಯಲ್ಲಿ ಏಕ ಮಾನದಂಡವಿಲ್ಲದೆ ಕಟ್ಟಡಗಳು ಬೇಕಾಬಿಟ್ಟಿಯಾಗಿ ನಿರ್ಮಾಣವಾಗುತ್ತಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇನೆÉ ಎಂದು ರಮೇಶ್ ಹೊಳ್ಳ ಹೇಳಿದರು. ಗದ್ದಿಗೆಯಲ್ಲಿ ಮೂಡಾದಿಂದ ನಿರ್ಮಿಸಲಾದ ಉದ್ಯಾನವನ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಬಗ್ಗೆ ಮೂಡಾ ಆಯುಕ್ತರೊಂದಿಗೆ ಮಾತುಕತೆ ನಡೆಸಿ ಆ ಉದ್ಯಾನವನವನ್ನು ಉತ್ತಮಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಜಿಲ್ಲೆಯ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳೊಂದಿಗೆ ಸಭೆ ನಡೆಸಿ ನಗರದ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳುವುದಾಗಿ ರಮೇಶ್ ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು.

ನೇರವಾಗಿ ಸಂಪರ್ಕಿಸಿ

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸ ಕಾರ್ಯಗಳಿದ್ದರೂ ಜನತೆ ನೇರವಾಗಿ ಬಂದು ವ್ಯವಹರಿಸುವಂತೆ ಮನವಿ ಮಾಡಿದ ರಮೇಶ್ ಹೊಳ್ಳ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ ಎಂದರು. ನಗರ ವ್ಯಾಪ್ತಿಯಲ್ಲಿರುವ ಹಿರಿಯರು, ಪರಿಣಿತರು, ನಗರ ಅಭಿವೃದ್ಧಿ ಸಂಬಂಧ ಮೂಡಾಕ್ಕೆ ಸೂಕ್ತ ಸಲಹೆ ಸೂಚನೆಗಳಿದ್ದರೆ ಕೊಡಬಹುದು ಎಂದು ಅವರು ಹೇಳಿದರು.

ರಮೇಶ್ ಹೊಳ್ಳ ಈ ಹಿಂದೆ ಕೌನ್ಸಿಲರ್ ಆಗಿ, 15 ವರ್ಷ ದಸರಾ ಸಮಿತಿ ಉಪಾಧ್ಯಕ್ಷರಾಗಿ, ನಗರ ಚೇಂಬರ್ ಅಧ್ಯಕ್ಷ, ಕಾರ್ಯದರ್ಶಿಯಾಗಿ, ಬ್ರಾಹ್ಮಣ ಸಮಾಜ ಕಾರ್ಯದರ್ಶಿಯಾಗಿ, ಓಂಕಾರೇಶ್ವರ ದೇವಾಲಯ ಸಮಿತಿ ಸದಸ್ಯರಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದುವರೆಗೂ ಮೂಡಾದ ಪ್ರಭಾರ ಅಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಇಂದು ರಮೇಶ್ ಹೊಳ್ಳ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರಮೇಶ್ ಹೊಳ್ಳ ಅವರನ್ನು ದೇವಾಲಯ ಸಮಿತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಆರ್.ಎಂ.ಸಿ. ಅಧ್ಯಕ್ಷ ಬೆಪ್ಪುರನ ಮೇದಪ್ಪ, ಮೂಡಾ ಆಯುಕ್ತ ಆರ್. ಶೇಷ, ಪ್ರಕಾಶ್ ಆಚಾರ್ಯ ಇದ್ದರು.