ಮಡಿಕೇರಿ, ಸೆ. 2: ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯೂ ಸೇರಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಾಲೂಕು ಕಚೇರಿಗಳಿಂದ ಗ್ರಾ.ಪಂ. ಹಂತದ ಹಲವಷ್ಟು ಕಚೇರಿಗಳು, ವಿದ್ಯಾರ್ಥಿ ನಿಲಯಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿಯು ಸೇರಿದಂತೆ ಸಾಕಷ್ಟು ನೌಕರರು ಸರಕಾರದ ವ್ಯವಸ್ಥೆಯಡಿ ವಿವಿಧ ಏಜೆನ್ಸಿಗಳ ನೆರಳಿನಲ್ಲಿ ದುಡಿಯುತ್ತಿದ್ದಾರೆ. ಇಂತಹ ನೌಕರರು ಸಂಬಳವಿಲ್ಲದೆ ಕಾಣದ ಅಕ್ರಮ ಅಡ್ಡೆಗಳಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ. ಅಪ್ಪಿ ತಪ್ಪಿ ಸಂಬಳವು ಲಭಿಸದಿರುವ ಬಗ್ಗೆ ಪ್ರಶ್ನಿಸಿದರೆ ಕೆಲಸ ಕಳೆದುಕೊಂಡು ಸದ್ದಿಲ್ಲದೆ ಮನೆ ಸೇರುವಂತಾಗಿದೆ.ಕೊಡಗು ಜಿಲ್ಲೆಯೊಂದರಲ್ಲೇ ಈ ರೀತಿಯಾಗಿ ವಿವಿಧ ಇಲಾಖೆಗಳಲ್ಲಿ ನೂರಾರು ನೌಕರರು ಹಾಗೂ ಕೆಲವಷ್ಟು ಅಧಿಕಾರಿಗಳು ಕೂಡ ಕಳೆದ ನಾಲ್ಕಾರು ತಿಂಗಳಿನಿಂದ ವೇತನ ಲಭಿಸದೆ ಸುಸ್ತು ಹೊಡೆದಿದ್ದಾರೆ. ಅಕ್ರಮ ಅಡ್ಡೆ: ‘ಶಕ್ತಿ’ಗೆ ಲಭಿಸಿರುವ ಖಚಿತ ಮಾಹಿತಿ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಯಾವುದೇ ಹುದ್ದೆಗಳಿಗೆ ನೇರ ನೇಮಕಾತಿಯೊಂದಿಗೆ ವೇತನ ಪಾವತಿ ಮಾಡುತ್ತಿಲ್ಲ; ಬದಲಾಗಿ ಖಾಸಗಿ ಏಜೆನ್ಸಿಗಳಿಗೆ ಸರಕಾರದ ಷರತ್ತುಗಳಿಗೆ ಒಳಪಟ್ಟಂತೆ ಹುದ್ದೆಗಳ ನೇಮಕಾತಿಯೊಂದಿಗೆ ಆಯ ಉದ್ಯೋಗಸ್ಥ ಅಧಿಕಾರಿ ಅಥವಾ ನೌಕರರಿಗೆ ಸಂಬಂಧಿಸಿದವರು ಮಾಸಿಕವಾಗಿ ನಿಗದಿತ ವೇತನ ಪಾವತಿಸಬೇಕಿದೆ.

ಈ ಷರತ್ತುಗಳಿಗೆ ಒಪ್ಪಿರುವ ಏಜೆನ್ಸಿಗಳು ವಿವಿಧ ಇಲಾಖೆಗಳಲ್ಲಿ ಸರಕಾರಿ ಕೆಲಸ ಕಾರ್ಯಗಳ ನಿರ್ವಹಣೆ ವಹಿಸಿಕೊಂಡಿವೆ. ಆ ಪ್ರಕಾರ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗಡೆ ವೇತನ ಬಟವಾಡೆ ಮಾಡುವುದು ಏಜೆನ್ಸಿಗಳ ಹೊಣೆಗಾರಿಕೆಯಾಗಿದೆ.

ಅಕ್ರಮಕ್ಕೆ ದಾರಿ: ಕೆಲವು ಸರಕಾರಿ ಇಲಾಖೆಯ ಪ್ರಮುಖ ಆಡಳಿತಾಧಿಕಾರಿಗಳು ಮತ್ತು ಲೆಕ್ಕಾಧಿಕಾರಿಗಳು ಇಂತಹ ಏಜೆನ್ಸಿಗಳೊಂದಿಗೆ ಶಾಮಿಲಾಗಿ ಅಕ್ರಮ ಎಸಗುವ ದಾರಿ ಕಂಡುಕೊಂಡಿದ್ದಾರೆ. ಮೂಲಗಳ ಪ್ರಕಾರ ಏಜೆನ್ಸಿ ಮಂದಿ ಇಂತಹವರಿಗೆ ಪದೇ ಪದೇ ಆಮಿಷವೊಡ್ಡುತ್ತಾ; ಕರ್ತವ್ಯ ನಿರತ ಸಿಬ್ಬಂದಿಗಳನ್ನು ದುಡಿಸಿಕೊಂಡು, ಯಾರಾದರೂ ಈ ಕಾಲಘಟ್ಟದಲ್ಲಿ ಸರಿಯಾಗಿ ಸಂಬಳ ಸಿಗದಿರುವ ಬಗ್ಗೆ ಪ್ರಶ್ನಿಸಿದರೆ ಅಂತಹವರನ್ನು ಕಾರಣವಿಲ್ಲದೆ ಮೌಖಿಕವಾಗಿ ಮನೆಗೆ ಕಳುಹಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ಆರೋಪವಿದೆ.

ಇಂತಹ ಸಂದರ್ಭ ನಾಲ್ಕಾರು ತಿಂಗಳ ವೇತನವನ್ನು ಏಜೆನ್ಸಿ ಮಂದಿ ಹಾಗೂ ಆಯಕಟ್ಟಿನಲ್ಲಿ ಕುಳಿತಿರುವ ವ್ಯಕ್ತಿಗಳು ಹಂಚಿಕೆ ಮಾಡಿಕೊಳ್ಳುತ್ತಿರುವ ದೋಷಾರೋಪವಿದೆ.

ಬಜೆಟ್‍ನಲ್ಲಿ ಹಣವಿಲ್ಲ: ‘ಶಕ್ತಿ’ಗೆ ಲಭಿಸಿರುವ ಖಚಿತ ಮಾಹಿತಿ ಪ್ರಕಾರ 2019ರ ನವೆಂಬರ್‍ನಿಂದ 2020ರ ಫೆಬ್ರವರಿ ತನಕ ಅದೆಷ್ಟೋ ಇಂತಹ ನೌಕರರಿಗೆ ವೇತನ ಲಭಿಸಿಲ್ಲ. ಸಂಬಂಧಿಸಿದ ಮೇಲಧಿಕಾರಿಗಳನ್ನು ಪ್ರಶ್ನಿಸಿದಾಗಲೆಲ್ಲಾ ಕೊರೊನಾ ನಡುವೆ ತಾಂತ್ರಿಕ ತೊಂದರೆಯ ಸಬೂಬು ಹೇಳುತ್ತಾ ಬಂದಿದ್ದಾರೆ.

ದಿಢೀರ್ ಸಂಬಳ: ಈ ನಡುವೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿಗೆ ಸಂಬಂಧಿಸಿದಂತೆ ಕೇವಲ ಎರಡು ತಿಂಗಳ ಸಂಬಳ ನೀಡಿ ನೌಕರರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಹಿಂದಿನ ನಾಲ್ಕಾರು ತಿಂಗಳ ಸಂಬಳ ಕೇಳಿದರೆ ಸರಕಾರದ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿರುವುದಿಲ್ಲ ಎಂಬ ಹಾರಿಕೆ ಉತ್ತರ ದೊರಕಿದೆ.

ಆತಂಕದಲ್ಲಿ ದುಡಿಮೆ: ಈ ನಡುವೆ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಶಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಳೆದ ಐದು ವರ್ಷಗಳಿಂದ ಉದ್ಯೋಗಿಯಾಗಿದ್ದ ಯುವತಿಯೊಬ್ಬರು ಕೊರೊನಾ ನಡುವೆ ನಿರಂತರ ಸಂಬಳವಿಲ್ಲದ ನೋವಿನ ಜೊತೆ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿರುವ ಇತರ ಉದ್ಯೋಗಿಗಳು ತುಟಿಪಿಟಿಕ್ ಎನ್ನದೆ ಆತಂಕದ ನಡುವೆ ಸಂಬಳ ಸಿಗದಿದ್ದರೂ ನಿತ್ಯ ದುಡಿಮೆಯಲ್ಲಿ ತೊಡಗಿದ್ದಾರೆ.

ಇದೇ ರೀತಿ ಪೊನ್ನಂಪೇಟೆ ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಜೀಪು ಚಾಲಕ ಅದೇ ಕಾರಣದಿಂದ ಕೆಲಸ ಕಳೆದುಕೊಂಡರೆ, ಮಡಿಕೇರಿಯ ತೋಟಗಾರಿಕಾ ಕಚೇರಿ, ಅಕ್ಷರ ದಾಸೋಹ ಸಿಬ್ಬಂದಿ ಇತ್ಯಾದಿಯಾಗಿ ಅನೇಕರು ಸಂಬಳ ಲಭಿಸದೆ ಮನೆ ಸೇರಿರುವ ಮಾಹಿತಿ ಲಭಿಸಿದೆ.

ಒಟ್ಟಿನಲ್ಲಿ ಯಾವುದೋ ಕಾಣದ ಅಕ್ರಮ ಅಡ್ಡೆಯ ನೆರಳಿನಲ್ಲಿ ಕೊಡಗು ಜಿಲ್ಲಾಡಳಿತ ಕಚೇರಿಯಿಂದ ಗ್ರಾ.ಪಂ. ಹಂತದ ತನಕ ಮೂವತ್ತಕ್ಕೂ ಅಧಿಕ ಇಲಾಖೆಗಳ ಸಾಕಷ್ಟು ನೌಕರರು ಮಾಸಿಕ ವೇತನವಿಲ್ಲದೆ ನಿರಂತರ ದುಡಿಮೆಯೊಂದಿಗೆ ನಲುಗುತ್ತಿದ್ದಾರೆ. ಎಲ್ಲಿ ಪ್ರಶ್ನಿಸಿದರೆ ಇರುವ ಕೆಲಸಕ್ಕೂ ಕುತ್ತು ಬರುವುದೋ ಎಂಬ ಭಯದಿಂದ ಮೂಕವೇದನೆ ಅನುಭವಿಸುತ್ತಿದ್ದಾರೆ.

ಜನಪ್ರತಿನಿಧಿಗಳ ಗಮನ ಸೆಳೆದಿರುವ ಅಸಹಾಯಕರಿಗೆ ‘ನಮ್ಮ ಸರಕಾರದ ಮಾರ್ಯಾದೆ ಪ್ರಶ್ನೆ ಏನು ಮಾಡುವುದು? ಎಂದು ನುಣುಚಿಕೊಳ್ಳುತ್ತಾ, ಅಭಿವೃದ್ಧಿಗೂ ನಮಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಕೈ ಚೆಲ್ಲುತ್ತಿದ್ದಾರಂತೆ!