ಮಡಿಕೇರಿ, ಸೆ. 2: ಕೊರೊನಾ ಲಾಕ್‍ಡೌನ್‍ನಿಂದಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಜೊತೆಗೆ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ.

ಆದ್ದರಿಂದ ಈ ದಿಸೆಯಲ್ಲಿ ತಾನು ಆದಷ್ಟು ಶೀಘ್ರ ಕ್ರಮಕೈಗೊಳ್ಳಲಿದ್ದೇನೆ ಎಂದು ನೂತನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿ ರುವ ಈಶ್ವರ್ ಕುಮಾರ್ ಕಾಂದೂ ಹೇಳಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ಹಾಗೂ ಪರಿಹಾರ ಒದಗಿಸುವ ಕಾರ್ಯ ಬಾಕಿಯಿದ್ದು, ಆ ಬಗ್ಗೆ ಗಮನ ಹರಿಸಲಿದ್ದೇನೆ. ವನ್ಯ ಪ್ರಾಣಿಗಳಿಂದ ಬೆಳೆ ನಷ್ಟ ಉಂಟಾಗುವ ಪ್ರಕರಣಗಳ ಸಂಬಂಧ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸುತ್ತೇನೆ ಎಂದರು.

ಬಾಣೆ ಜಾಗ ಸಂಬಂಧವೂ ಪರಿಶೀಲಿಸುತ್ತೇನೆ. ವಾರಕ್ಕೊಮ್ಮೆ ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುವ ಪ್ರಯತ್ನ ಮಾಡಲಿದ್ದೇನೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಜನತೆ ತನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಈಶ್ವರ್ ಕುಮಾರ್ ಕಾಂದೂ ಹೇಳಿದರು.

ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿರುವ ಈಶ್ವರ್ ಕುಮಾರ್ ಕಾಂದೂ 2018ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ.