ಮಡಿಕೇರಿ, ಆ. 31: ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ (2020-21) ಸಹ ರೈತರಿಂದ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೋಂದಣಿ ಶುಲ್ಕ ಎಲ್ಲಾ ಮಟ್ಟಗಳಿಗೆ ಅನ್ವಯಿಸುವಂತೆ ಸಾಮಾನ್ಯ ರೈತರಿಗೆ ರೂ. 100 ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ರೂ.25 ಆಗಿರುತ್ತದೆ.

ನಿಬಂಧನೆಗಳು: ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧಾ ಬೆಳೆ ಬೆಳೆದಿರಬೇಕು. ಸ್ವಂತ ಜಮೀನು ಇರುವ ಬಗ್ಗೆ ಪಹಣಿ ಪತ್ರ ಹೊಂದಿರಬೇಕು. ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತ/ ರೈತ ಕುಟುಂಬದವರು ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಬೆಳೆಯ ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.

ತಾಲೂಕು ಮಟ್ಟದಲ್ಲಿ ಬಹುಮಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದವರು ರಾಜ್ಯ ಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ. ಆದರೆ ಕೆಳ ಹಂತದ ಸ್ಪರ್ಧೆಗೆ ಸ್ಪರ್ಧಿಸುವಂತಿಲ್ಲ. ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕವನ್ನು ತಿಳಿಸತಕ್ಕದ್ದು.

ಬಹುಮಾನದ ಮೊತ್ತ ತಾಲೂಕು ಮಟ್ಟ ಪ್ರಥಮ ರೂ. 15 ಸಾವಿರ, ದ್ವಿತೀಯ ರೂ. 10 ಸಾವಿರ, ತೃತೀಯ ರೂ. 5 ಸಾವಿರ ಜಿಲ್ಲಾ ಮಟ್ಟಕ್ಕೆ ಪ್ರಥಮ ರೂ. 30 ಸಾವಿರ, ದ್ವಿತೀಯ ರೂ. 25 ಸಾವಿರ, ತೃತೀಯ ರೂ. 20 ಸಾವಿರ ಆಗಿದೆ. ಅಂತೆಯೆ ರಾಜ್ಯ ಮಟ್ಟಕ್ಕೆ ಪ್ರಥಮ ರೂ. 50 ಸಾವಿರ, ದ್ವಿತೀಯ ರೂ. 40 ಸಾವಿರ ಮತ್ತು ತೃತೀಯ ರೂ. 35 ಸಾವಿರಗಳಾಗಿರುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಕಂದಾಯ ಇಲಾಖೆಯಿಂದ ಪಡೆದ ಪಹಣಿ ಪತ್ರದೊಂದಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ಸೆಪ್ಟಂಬರ್ 15 ಆಗಿದ್ದು, ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.