ಕಣಿವೆ, ಆ. 31: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯ ಸರ್ಕಾರಿ ಪದವಿ ಕಾಲೇಜು ಬಳಿ ರಾಜ್ಯ ಸರ್ಕಾರ ಸಾರ್ವಜನಿಕರ ಉದ್ದೇಶಗಳಿಗೆಂದು ನಿರ್ಮಿಸಿರುವ ಭವನಗಳು ನಿರ್ವಹಣೆಯ ಕೊರತೆಯಿಂದಾಗಿ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಈ ಅನೈತಿಕ ಚಟುವಟಿಕೆಗಳ ತಾಣಕ್ಕೆ ಈ ಭವನಗಳ ಸುತ್ತಲೂ ಬೆಳೆದು ನಿಂತಿರುವ ಕಾಡು ಗಿಡಗಳು ಹಾಗೂ ವಿವಿಧ ಸಸ್ಯಗಳು ಹೊದಿಕೆಯಾಗಿವೆ.

ಅಂದರೆ ಅಷ್ಟರಮಟ್ಟಿಗೆ ಕಾಡು ಗಿಡಗಳು ಬೆಳೆದು ನಿಂತಿವೆ. ಸುಂದರ ಪರಿಸರದಲ್ಲಿ ಮಹಾತ್ಮರ ಹೆಸರಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನ, ಡಾ. ಅಂಬೇಡ್ಕರ್ ಭವನಗಳನ್ನು ಹೇಳುವವರು ಕೇಳುವವರು ಇಲ್ಲದೇ ಅನಾಥವಾಗಿವೆ. ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿರುವ ಈ ಭವನಗಳ ಸುತ್ತ ಸೂಕ್ತ ತಡೆಗೋಡೆಗಳು ಹಾಗೂ ಭದ್ರವಾದ ಗೇಟುಗಳನ್ನು ಅಳವಡಿಸದೇ ಹಾಗೇ ಹಾಳು ಬಿಟ್ಟಿರುವುದು ಪುಂಡರು, ಪೆÇೀಲಿಗಳನ್ನು ಕೈ ಬೀಸಿ ಕರೆಯುವಂತಿವೆ. ಹೀಗಾಗಿ ಈ ಕಟ್ಟಡಗಳ ಬಳಿ ಮದ್ಯವನ್ನು ತಂದು ಕುಡಿದು ಬಿಸಾಡಿರುವ ಗಾಜಿನ ಖಾಲಿ ಬಾಟಲಿಗಳು, ಒಡೆದ ಗಾಜುಗಳು, ನೀರಿನ ಬಾಟಲಿಗಳು, ಧಮ್ ಎಳೆದು ಬಿಸಾಡಿರುವ ಸಿಗರೇಟ್ ಪ್ಯಾಕ್‍ಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯೇ ಈ ಭವನಗಳನ್ನು ಆವರಿಸಿವೆ. ಇಲ್ಲಿ ಪ್ರತೀ ದಿನ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಬರುವ ಪುಂಡರ ಗಲಾಟೆ ಗದ್ದಲಗಳು ಇಲ್ಲಿನ ಕೆಲ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ಇದನ್ನು ಪ್ರಶ್ನಿಸ ಹೊರಟ ನಿವಾಸಿಗಳ ಮೇಲೆಯೇ ನಿಶೆಯೇರಿದ ಪುಂಡರು ಥಳಿಸಲು ಹೋಗಿರುವ ಪ್ರಸಂಗಗಳು ನಡೆದಿವೆ. ಆದರೆ ಏನು ಮಾಡೋದು ಹೇಳಿ, ಅವರ ಬಳಿ ನಾವೇಕೆ ಏಟು ತಿನ್ನೋದು, ಬೈಗುಳ ಕೇಳೋದು ಎಂದು ಅಲ್ಲಿನ ನಿವಾಸಿ ಜಯಮ್ಮ ಹಾಗೂ ಚಂದ್ರಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಪುಂಡ ಪೆÇೀಕರಿಗಳು ಭವನಗಳಿಗೆ ಅಳವಡಿಸಿರುವ ಕಿಟಕಿಯ ಗಾಜುಗಳನ್ನು ಒಡೆದು ಪುಡಿಗೈದಿದ್ದಾರೆ. ವಿದ್ಯುತ್ ಬಲ್ಬ್‍ಗಳನ್ನು ಕೂಡ ಹಾನಿ ಮಾಡಿದ್ದಾರೆ. ಕಳೆದ 2018 ರಲ್ಲಿ ಸಂಭವಿಸಿದ ಜಲಪ್ರವಾಹದ ಸಂತ್ರಸ್ತರಿಗೆ ಆಶ್ರಯ ನೀಡಿದ್ದ ಈ ಭವನಗಳು ಇಂದು ಅವ್ಯವಸ್ಥೆಯನ್ನು ಹೊದ್ದು ನಿಂತಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಬೇಕಿದೆ. ಜೊತೆಗೆ ಪೆÇಲೀಸರು ರಾತ್ರಿ ವೇಳೆ ಗಸ್ತು ತಿರುಗುವ ಮೂಲಕವಾದರೂ ಪುಂಡರಿಗೆ ಎಚ್ಚರಿಕೆ ನೀಡುವ ಕೆಲಸವಾಗಬೇಕಿದೆ. ಒಂದೆಡೆ ಬೆಳೆಯುತ್ತಿರುವ ನಗರ ಕುಶಾಲನಗರ ಪಟ್ಟಣದಲ್ಲಿ ಖಾಸಗಿ ಕಟ್ಟಡಗಳಲ್ಲಿ ಹಲವು ಸರ್ಕಾರಿ ಇಲಾಖೆಗಳು, ವಿವಿಧ ವಸತಿ ನಿಲಯಗಳು, ಅಷ್ಟೇ ಏಕೆ ಕಳೆದ ಎರಡು ವರ್ಷಗಳ ಹಿಂದೆ ಕುಶಾಲನಗರಕ್ಕೆ ಬಂದ ಉಪನೋಂದಣಾಧಿಕಾರಿಗಳ ಕಚೇರಿ ಸೇರಿದಂತೆ ಇನ್ನೂ ಹಲವು ಇಲಾಖೆಗಳು ಮಾಸಿಕ ಲಕ್ಷಾಂತರ ರೂಪಾಯಿಗಳ ಬಾಡಿಗೆ ವ್ಯಯಿಸಿ ನಡೆಯುತ್ತಿವೆ. ಆದರೆ ಬಂದ ಅನುದಾನವನ್ನು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ವ್ಯವಸ್ಥಿತವಾಗಿ ನಿರ್ಮಿಸಿ ನಿರ್ವಹಿಸುವಲ್ಲಿ ವಿಫಲವಾಗುತ್ತಿದ್ದು ಸಾರ್ವಜನಿಕ ಹಣ ಅನ್ಯಥಾ ಪೆÇೀಲಾಗುತ್ತಿದೆ. ಇಂತಹ ಅವ್ಯವಸ್ಥೆಗಳು ಆಗದಂತೆ ಇನ್ನಾದರೂ ಜಿಲ್ಲಾಡಳಿತ ಕ್ರಮವಹಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. -ಕೆ. ಎಸ್. ಮೂರ್ತಿ