ಡ್ರಗ್ಸ್ ನಿಯಂತ್ರಣಕ್ಕೆ ತಂಡ ರಚನೆ
ಬೆಂಗಳೂರು, ಆ. 31: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕಾಗಿ ಇಂದು ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ಕುರಿತು ಗಂಭೀರವಾಗಿ ಚರ್ಚಿಸಲಾಯಿತು. ಈಗಾಗಲೇ 1438 ಡ್ರಗ್ಸ್ ಕೇಸ್‍ಗಳು ದಾಖಲಾಗಿ 1792 ಜನರನ್ನು ಬಂಧಿಸಲಾಗಿದೆ. ಕೇಂದ್ರ ವಲಯದ ಐ.ಜಿ. ಇವರ ನೇತೃತ್ವದಲ್ಲಿ ಜಂಟಿ ತಂಡ ರಚನೆ. ವೀಸಾ ಅವಧಿ ಮುಗಿದ ಮೇಲೂ ಭಾರತದ ಉಳಿದ ವಿದೇಶಿಗರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವುದು, ಕಾಲೇಜುಗಳು ಪ್ರಾರಂಭವಾದ ತಕ್ಷಣ ಪ್ರಮುಖ ಸಂಘಟನೆಗಳೊಂದಿಗೆ ಜೊತೆ ಸೇರಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
8 ಕೋಟಿ ಕೈಗಾರಿಕೆಗಳ ಉತ್ಪಾದನೆ ಕುಸಿತ
ನವದೆಹಲಿ, ಆ.31 : ಸತತ 5ನೇ ತಿಂಗಳಲ್ಲಿ 8 ಕೋಟಿ ಕೈಗಾರಿಕೆಗಳ ಉತ್ಪಾದನೆ ಕುಸಿತ ಕಂಡಿದ್ದು, ಜುಲೈ ತಿಂಗಳಲ್ಲಿ ಶೇ.9.6 ರಷ್ಟು ಕುಸಿತ ದಾಖಲಾಗಿದೆ. ಜುಲೈ ತಿಂಗಳಲ್ಲಿ 8 ಕೋಟಿ ಮೂಲಸೌಕರ್ಯ ಕೈಗಾರಿಕೆಗಳು ಒಟ್ಟಾರೆ ಸೂಚ್ಯಂಕ ಶೇ.119.9 ರಷ್ಟಿದ್ದು, 2019 ಕ್ಕೆ ಹೋಲಿಕೆ ಮಾಡಿದರೆ ಶೇ.9.6 ರಷ್ಟು ಕುಸಿದಿದೆ. 2020-21 ರ ಒಟ್ಟಾರೆ ಬೆಳವಣಿಗೆ ಶೇ.20.5 ರಷ್ಟಿತ್ತು ಎಂದು ಅಂಕಿ-ಅಂಶಗಳ ಮೂಲಕ ತಿಳಿದು ಬಂದಿದೆ. 2020 ರ ಏಪ್ರಿಲ್ ನಲ್ಲಿ 8 ಕೋಟಿ ಕೈಗಾರಿಕೆಗಳ ಬೆಳವಣಿಗೆ ಸೂಚ್ಯಂಕ ಶೇ.37.9 ರಷ್ಟಿದೆ. ಜುಲೈ ತಿಂಗಳ ಕಲ್ಲಿದ್ದಲು ಉತ್ಪಾದನೆ ಶೇ.5.7 ರಷ್ಟು ಕುಸಿತ ಕಚ್ಚಾ ತೈಲ ಉತ್ಪಾದನೆ ಶೇ.49, ನೈಸರ್ಗಿಕ ಅನಿಲ ಉತ್ಪಾದನೆ ಶೇ.10.2 ರಷ್ಟು ಕುಸಿತ. ಪೆಟ್ರೋಲಿಯಮ್ ರಿಫೈನರಿ ಉತ್ಪಾದನೆ ಶೇ.13.9 ರಷ್ಟು ಕುಸಿತ, ಗೊಬ್ಬರ ಉತ್ಪಾದನೆ ಶೇ.6.9 ರಷ್ಟು ಕುಸಿತ ಕಂಡಿದ್ದರೆ ಸ್ಟೀಲ್ ಉತ್ಪಾದನೆ ಶೇ.16.4 ರಷ್ಟು ಕುಸಿತ ಕಂಡಿದೆ. ಸಿಮೆಂಟ್ ಹಾಗೂ ಎಲೆಕ್ಟ್ರಿಸಿಟಿ ಉತ್ಪಾದನೆ ಅನುಕ್ರಮವಾಗಿ ಶೇ.13.5 ಹಾಗೂ ಶೇ.2.3 ರಷ್ಟು ಕುಸಿತ ಕಂಡಿದೆ.
ಡ್ರಗ್ಸ್ ದಂಧೆಯ ಸಾಕ್ಷಿ ನೀಡಿದ ಇಂದ್ರಜಿತ್
ಬೆಂಗಳೂರು, ಆ.31 : ಮಾದಕ ಜಗತ್ತಿಗೂ ಚಂದನವನಕ್ಕೂ ನಂಟಿದೆ ಎಂಬ ಆರೋಪಕ್ಕೆ ತಮ್ಮ ಸಾಕ್ಷ್ಯಾಧಾರದಿಂದ ಮತ್ತಷ್ಟು ಪುಷ್ಟಿ ನೀಡಿರುವ ಇಂದ್ರಜಿತ್ ಲಂಕೇಶ್ ಅವರು, ಚಿರಂಜೀವಿ ಸರ್ಜಾ ಕುರಿತು ನೀಡಿದ್ದ ಹೇಳಿಕೆ ಹಿಂಪಡೆಯುವುದಾಗಿ ಸೋಮವಾರ ಹೇಳಿದ್ದಾರೆ. ಇಂದು ನಗರದ ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಅವರು, ನೇರವಾಗಿ ಚಿರಂಜೀವಿ ಸರ್ಜಾ ಅವರ ಹೆಸರು ಹೇಳದೆ, ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಇತ್ತೀಚಿಗೆ ಮೃತಪಟ್ಟ ಯುವ ನಟನ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು ಎಂಬ ಹೇಳಿಕೆ ಹಿಂಪಡೆಯುವೆ ಎಂದಿದ್ದಾರೆ. ಸಿಸಿಬಿ ಅಧಿಕಾರಿಗಳ ಜತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರ ತನಿಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ನಿನ್ನೆ ಮೊನ್ನೆ ಬಂದ ನಟರು ಡ್ರಗ್ಸ್ ಮಾಫಿಯಾಗೆ ಬ್ರಾಂಡ್ ಅಂಬಾಸಿಡರ್‍ಗಳು ಆಗಿದ್ದಾರೆ. ನಾನು ಇದುವರೆಗೂ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ನನ್ನ ಬಳಿರುವ ಎಲ್ಲ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವರ ತನಿಖೆಗೆ ಸಹಕಾರವಾಗುವಂತೆ ನನಗೆ ತಿಳಿದ ಎಲ್ಲ ಮಾಹಿತಿಗಳನ್ನು ಅವರಿಗೆ ಕೊಟ್ಟಿದ್ದೇನೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ಪ್ರವಾಹದಿಂದ 251 ಸಾವು
ಢಾಕಾ, ಆ.31 : ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಗಳಿಂದಾಗಿ ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಒಟ್ಟು 251 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದ ಅಧೀನದಲ್ಲಿರುವ ದೇಶದ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ನಿಯಂತ್ರಣಾ ಕೊಠಡಿಯ ದೈನಂದಿನ ಪ್ರವಾಹ ವರದಿಯಂತೆ, ಜೂನ್ 30 ರಿಂದ ಬಾಂಗ್ಲಾದೇಶದ 33 ಜಿಲ್ಲೆಗಳಲ್ಲಿ ಮೂರು ಬಾರಿ ವಿನಾಶಕಾರಿ ಪ್ರವಾಹಗಳು ಉಂಟಾಗಿ ಅಪಾರ ಸಾವು-ನೋವಿಗೆ ಕಾರಣವಾಗಿದೆ. ಹೆಚ್ಚಿನ ನತದೃಷ್ಟರು ಪ್ರವಾಹದ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಇನ್ನೂ ಕೆಲವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವು ಕಡಿತ ಮತ್ತು ಮಿಂಚು ಹೊಡೆದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಒಟ್ಟಾರೆ ಪ್ರವಾಹ ಪರಿಸ್ಥಿತಿಯು ಹೆಚ್ಚಿನ ಜಿಲ್ಲೆಗಳಲ್ಲಿ ಸುಧಾರಣೆಯಾಗಿದೆ. ಅನೇಕ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಪ್ರವಾಹದ ನೀರು ಕಡಿಮೆಯಾಗುತ್ತಲೇ ಇರುವುದರಿಂದ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಬಾಂಗ್ಲಾದೇಶದ ಜಲ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸರ್ದರ್ ಉದೋಯ್ ರೈಹಾನ್ ತಿಳಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಿವಾನಿ
ಧರ್ಮಸ್ಥಳ, ಆ.31 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದ ಆನೆ ಲಕ್ಷ್ಮೀಗೆ ಜನಿಸಿದ ಆನೆ ಮರಿಗೆ ಇಂದು ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ. ಕಳೆದ ಜುಲೈ 1 ರಂದು ದೇಗುಲದ ಆನೆ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಆನೆ ಮರಿಯ ನಾಮಕರಣ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಈ ವೇಳೆ ಈ ಹೆಣ್ಣು ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ. ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಮಾನ್ಯ ಅವರು ಶಿವಾನಿ ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು. ಇದೇ ವೇಳೆ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣರಿಗೆ ಸನ್ಮಾನ ನೆರವೇರಿಸಿದರು.
ಗ್ರೆನೇಡ್ ದಾಳಿ ನಡೆಸಿದ ಉಗ್ರರು
ಶ್ರೀನಗರ, ಆ.31 : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರತೀಯ ಸೇನಾಪಡೆಯ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ ಒಂದು ಗುರಿತಪ್ಪಿ ರಸ್ತೆಯಲ್ಲಿಯೇ ಸ್ಫೋಟಗೊಂಡಿದ್ದು, ಪರಿಣಾಮ ಸ್ಥಳದಲ್ಲಿದ್ದ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಬಾರಾಮುಲ್ಲಾದ ರಸ್ತೆಯ ಬಳಿಕ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದವು. ರಸ್ತೆ ದಾಟುವ ಸಂದರ್ಭದಲ್ಲಿ ಸೇನಾಪಡೆಗಳ ವಾಹನಗಳ ಮೇಲೆ ಉಗ್ರರು ಏಕಾಏಕಿ ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ವೇಳೆ ಗುರಿ ತಪ್ಪಿ ರಸ್ತೆಯೊಂದರಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲಿದ್ದ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಗರೀಕರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, 6 ಮಂದಿಯ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗ್ರೆನೇಡ್ ದಾಳಿ ನಡೆಸಿದ ಕೂಡಲೇ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದು, ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಫೈಟರ್ ಜೆಟ್ ನಿಯೋಜಿಸಿದ ಚೀನಾ
ನವದೆಹಲಿ, ಆ.31 : ಪ್ಯಾಂಗಾಂಗ್ ತ್ಸೋ ಲೇಕ್ ಬಳಿ ಹೊಸದಾಗಿ ಅತಿಕ್ರಮಣ, ಉಲ್ಲಂಘನೆಗಳನ್ನು ಮಾಡುವುದಕ್ಕೂ ಕೆಲವೇ ದಿನಗಳ ಮುನ್ನ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆ ಲಡಾಖ್ ನಲ್ಲಿ ಜೆ-205 ಜನರೇಷನ್ ಫೈಟರ್ ಜೆಟ್‍ಗಳನ್ನು ನಿಯೋಜನೆ ಮಾಡಿದೆ. ಪ್ಯಾಂಗಾಂಗ್ ತ್ಸೋ ದಕ್ಷಿಣ ತೀರದಲ್ಲಿ ಚೀನಾದ ಜೆ-20 ಫೈಟರ್ ಜೆಟ್‍ಗಳು ಅತಿ ಹೆಚ್ಚು ಹಾರಾಟ ನಡೆಸುತ್ತಿವೆ. ಲಡಾಕ್‍ನ ಪ್ಯಾಂಗಾಂಗ್ ತ್ಸೋ ಲೇಕ್‍ನ ಪೂರ್ವದಲ್ಲಿರುವ ಚುಶುಲ್‍ನಲ್ಲಿ ಅತಿಕ್ರಮಣ ಮಾಡುವ ಚೀನಾ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಹೊಟಾನ್ ಪ್ರದೇಶದಲ್ಲಿ ಚೀನಾ ನಿರ್ಮಾಣ ಮಾಡಿರುವ ವಾಯುನೆಲೆಯಿಂದ ಭಾರತದ ಲಡಾಖ್ ಪ್ರದೇಶದಲ್ಲಿ ಚೀನಾ ಫೈಟರ್ ಜೆಟ್‍ಗಳು, ಸ್ಟ್ರಾಟಜಿಕ್ ಬಾಂಬರ್ ಏರ್ ಕ್ರಾಫ್ಟ್‍ಗಳು ಹಾರಾಡುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆÉ.