ಕೂಡಿಗೆ, ಆ. 31: ಜಿಲ್ಲೆಯಲ್ಲಿ ಕಳೆದ 15 ದಿನಗಳ ಹಿಂದೆ ಸುರಿದ ಮಳೆ, ಗಾಳಿಗೆ ಕುಶಾಲನಗರ ಹೋಬಳಿ ವ್ಯಾಪ್ತಿಯ 6 ಗ್ರಾಮ ಪಂಚಾಯಿತಿಗಳ 38 ಉಪ ಗ್ರಾಮಗಳಲ್ಲಿ ಜೋಳ ಬೆಳೆ ನೆಲಕ್ಕೆ ಬಿದ್ದು ಹಾಳಾಗಿವೆ. ಅಳಿದುಳಿದ ಜೋಳದ ಬೆಳೆಗೆ ಈ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಮಳೆಯಿಲ್ಲದೆ ಜೋಳ ಒಣಗಿ ಹಾಳಾಗುವಂತಹ ಪ್ರಸಂಗ ಎದುರಾಗಿವೆ
ಕುಶಾಲನಗರ ಹೋಬಳಿ ವ್ಯಾಪ್ತಿಯ ಸಿದ್ದಲಿಂಗಪುರ ಸೀಗೆಹೊಸೂರು, ತೊರೆನೂರು, ಹೆಬ್ಬಾಲೆ, 6ನೇ ಹೊಸಕೋಟೆ, ಅಳುವಾರ, ಮರೂರು, ಚಿಕ್ಕತ್ತೂರು, ದೊಡ್ಡತ್ತೂರು, ಹಳೆ ಕೋಟೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆ ಆಧಾರಿತವಾಗಿ ಜೋಳದ ಬೆಳೆ ಬೆಳೆಯುತ್ತಾರೆ. ಈ ವ್ಯಾಪ್ತಿಯಲ್ಲಿ ರೈತರು ಆಧುನಿಕ ಬೇಸಾಯ ಪದ್ಧತಿಯಲ್ಲಿ ಹೈಬ್ರಿಡ್ ತಳಿಯ ಜೋಳದ ಬೆಳೆಯನ್ನು ಬೆಳೆಯಲಾಗಿದೆ.
ಬಿತ್ತನೆ ಮಾಡಿ ಎರಡೂವರೆ ತಿಂಗಳುಗಳು ಕಳೆದಿವೆ. ಈ ಜೋಳವು ಕಾಳು ಕಟ್ಟುವ ಹಂತ ತಲುಪಿದೆ. ಹಾಲು ತುಂಬಿದ ರೀತಿಯಲ್ಲಿ ಇರುವ ಜೋಳದ ತೆನೆಯು ಉತ್ತಮ ಗುಣಮಟ್ಟದಲ್ಲಿ ಕಾಳು ಕಟ್ಟಲು ನೀರಿನ ಅವಶ್ಯಕತೆ ಪ್ರಮುಖವಾಗಿರುತ್ತದೆ. ಆದರೆ ಕಳೆದ ಎರಡು ವಾರದಿಂದ ಮಳೆಯಿಲ್ಲದೆ ಜೋಳದ ಬೆಳೆ ಒಣಗುತ್ತಿದೆ. ಮಳೆ ಬರದಿದ್ದರೆ ತೆನೆ ಕಟ್ಟುವುದಿಲ. ಮಳೆಯಿಲ್ಲದೆ ಬೆಳೆ ಒಣಗುತ್ತಿದ್ದು, ನಷ್ಟ ಅನುಭವಿಸುವಂತಹ ಪ್ರಸಂಗ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.