ಸೋಮವಾರಪೇಟೆ, ಆ.31: ತಾ.30ರಂದು ರಾತ್ರಿ ಪಟ್ಟಣದ ಸಫಾಲಿ ಬಾರ್ ಮುಂಭಾಗದಲ್ಲಿ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ತಾ.30ರಂದು ರಾತ್ರಿ ತಾಕೇರಿ ಗ್ರಾಮದ ವಿನಯ್‍ಕುಮಾರ್ ಎಂಬಾತನ ಮೇಲೆ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಅಭಿ ಮತ್ತು ನಿತ್ಯ ಎಂಬವರುಗಳು ಕತ್ತಿಯಿಂದ ಹಲ್ಲೆ ನಡೆಸಿದ್ದು, ಕಾಲು, ಬೆನ್ನು ಮತ್ತು ತಲೆಯ ಭಾಗಕ್ಕೆ ಗಾಯವಾಗಿದ್ದರೂ ಸೋಮವಾರಪೇಟೆ ಪೊಲೀಸರು ಸೂಕ್ತ ಕಲಂಗಳಡಿ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿ, ಕುಟುಂಬ ಸದಸ್ಯರು ಶಾಸಕ ಅಪ್ಪಚ್ಚು ರಂಜನ್ ಅವರಲ್ಲಿ ದೂರಿದರು.

ಈ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ವಿಚಾರಿಸಿದ ಶಾಸಕರು, ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸದೇ ಇರುವ ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ದೂರವಾಣಿ ಮೂಲಕ ಠಾಣಾಧಿಕಾರಿಯನ್ನು ಸಂಪರ್ಕಿಸಿ, ಗಾಯಾಳುವಿಗೆ ಸುಮಾರು 20ಕ್ಕೂ ಅಧಿಕ ಹೊಲಿಗೆಯನ್ನು ಹಾಕಲಾಗಿದೆ. ಹಾಗಿದ್ದರೂ 307 ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಸಿ, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಪ್ಪಿದ್ದಲ್ಲಿ ಗೃಹ ಸಚಿವರು ಮತ್ತು ಡಿಜಿಪಿ ಅವರಿಗೆ ದೂರು ನೀಡಲಾಗುವದು ಎಂದು ಎಚ್ಚರಿಸಿದರು.