ಮಡಿಕೇರಿ ಆ.31 : ರಸ್ತೆ ದುರಸ್ತಿಯ ಕಾರಣ ನೀಡಿ ಮಡಿಕೇರಿ- ಮೇಕೇರಿ ಮೂಲಕ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಜಿಲ್ಲಾಡಳಿತ ಪರ್ಯಾಯವಾಗಿ ಮಡಿಕೇರಿ, ತಾಳತ್ತಮನೆ- ಮೇಕೇರಿ ಮಾರ್ಗವನ್ನು ಸೂಚಿಸಿದ್ದು, ಈ ಮಾರ್ಗದ ದುರಸ್ತಿ ಕಾರ್ಯ ಮೊದಲು ಆಗಬೇಕಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪರ್ಯಾಯ ಮಾರ್ಗ ಅತ್ಯಂತ ಕಿರಿದಾಗಿದ್ದು, ಸಂಪೂರ್ಣ ಹೊಂಡ, ಗುಂಡಿಗಳಿಂದ ಕೂಡಿದೆ. ಇದೀಗ ಹೆಚ್ಚಿನ ಸಂಖ್ಯೆಯ ವಾಹನಗಳ ಸಂಚಾರದಿಂದ ಮತ್ತಷ್ಟು ರಸ್ತೆ ಹದಗೆಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಡಿಕೇರಿ, ತಾಳತ್ತಮನೆ- ಮೇಕೇರಿ ರಸ್ತೆ ಅತ್ಯಂತ ಚಿಕ್ಕದಾಗಿದ್ದು, ಹೊರ ರಾಜ್ಯಗಳ ಭಾರೀ ವಾಹನಗಳು ಕೂಡ ಇದೇ ಮಾರ್ಗವಾಗಿ ಸಂಚರಿಸಬೇಕಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಬಿಸಿಲಿನ ವಾತಾವರಣವಿರುವುದರಿಂದ ತಕ್ಷಣ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.