ಕಣಿವೆ, ಆ. 31: ಕೂಡಿಗೆ ಗ್ರಾಮ ಪಂಚಾಯಿತಿ ಬಳಿಯಿಂದ ಕುಶಾಲನಗರ ಸರ್ಕಾರಿ ಆಸ್ಪತ್ರೆವರೆಗೆ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ನಿರ್ಮಿಸಿದ ಕೋಟಿ ವೆಚ್ಚದ ರಸ್ತೆ ಡಾಂಬರು ಮುಳ್ಳುಸೋಗೆಯ ಸೋಮೇಶ್ವರ ಕೆರೆಯ ಬಳಿ ಕಿತ್ತು ನಿಂತಿದೆ.

ಹೀಗಿದ್ದರೂ ಸಂಬಂಧಿಸಿದ ಪಿಡಬ್ಲ್ಯೂಡಿ ಇಂಜಿನಿಯರುಗಳು ಇಲ್ಲೇ ಸಂಚರಿಸಿದರೂ ಕೂಡ ಕಿತ್ತು ಹೋಗುತ್ತಿರುವ ಹೊಸ ಡಾಂಬರೀಕರಣದ ರಸ್ತೆಗೆ ತೇಪೆ ಹಚ್ಚುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಹೆದ್ದಾರಿಯ ಏಕ ಮುಖ ಸಂಚಾರವಿರುವ ಇಲ್ಲಿ ರಸ್ತೆ ಕಿತ್ತು ಹಳ್ಳ ನಿರ್ಮಾಣವಾಗಿದೆ. ಇದರ ಅರಿವು ಇಲ್ಲದ ವಾಹನ ಚಾಲಕರು ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದು ಇಲ್ಲಿ ಜಾಗೃತೆ ತಪ್ಪಿದರೆ ಅದರ ಅಪಾಯ ಗಾಡಿ ಮತ್ತು ಬಾಡಿ ಇಬ್ಬರಿಗೂ ಹಾನಿಯಾಗುತ್ತದೆ.

ಕೂಡಲೇ ಸಂಬಂಧಿಸಿದವರು ಜವಾಬ್ದಾರಿ ತೋರಬೇಕಿದೆ. ಕುಶಾಲನಗರ ದಿಂದ ಕೂಡಿಗೆಯವರೆಗೂ, ಕುಶಾಲನಗರದಿಂದ ಗುಡ್ಡೆಹೊಸೂರುವರೆಗೂ ಇದೇ ರೀತಿ ಜೋಡಿ ಪಥ ರಸ್ತೆ ನಿರ್ಮಿಸಿ ವಾಹನಗಳಿಗೆ ಏಕಮುಖ ಸಂಚಾರ ಮಾಡಿದರೆ ಅನುಕೂಲವೂ ಆಗುತ್ತದೆ. ಜೊತೆಗೆ ಪಟ್ಟಣದ ಅಂದ ಚಂದವೂ ಹೆಚ್ಚಲಿದೆ. -ಮೂರ್ತಿ