ಮಡಿಕೇರಿ, ಆ. 30: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಂತಹ ಸ್ಥಳವನ್ನು ಸ್ವಚ್ಛತೆಯೊಂದಿಗೆ ಮತ್ತಷ್ಟು ಸುಂದರವಾಗಿಸುವುದೇ ನನ್ನ ಗುರಿ ಎಂದು ಮಡಿಕೇರಿ ನಗರಸಭೆಗೆ ನೂತನ ಆಯುಕ್ತರಾಗಿ ನೇಮಕ ಗೊಂಡಿರುವ ಎಸ್.ವಿ. ರಾಮದಾಸ್ ಇಂಗಿತ ವ್ಯಕ್ತಪಡಿಸಿದರು.‘ಶಕ್ತಿ’ ಸಂದರ್ಶನದಲ್ಲಿ ಅವರು ಮಾತನಾಡಿ, ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಮೈಸೂರು ನಗರ ಸ್ಥಾನ ಪಡೆದಿದ್ದು, ಮುಂದಿನ ಬಾರಿ ಆ ಸ್ಥಾನವನ್ನು ಮಡಿಕೇರಿ ನಗರ ತನ್ನದಾಗಿಸಿಕೊಳ್ಳಬೇಕು. ಸ್ವಚ್ಛತೆಯ ವಿಚಾರದಲ್ಲಿ ಮಡಿಕೇರಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡಿಯೇ ತೀರುತ್ತೇನೆ ಎಂದು ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು. (ಮೊದಲ ಪುಟದಿಂದ) ರಸ್ತೆ ಸಮಸ್ಯೆ ಸರಿಪಡಿಸುವೆ ಮಡಿಕೇರಿ ನಗರದಲ್ಲಿ ರಸ್ತೆ ದುರವಸ್ಥೆ ಬಗ್ಗೆ ಮಾತನಾಡಿದ ಆಯುಕ್ತರು, ಮಳೆ ಅವಧಿ ಪೂರ್ಣಗೊಂಡ ಬಳಿಕ ಆದಷ್ಟು ಶೀಘ್ರವಾಗಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳುತ್ತೇನೆ. ಇದರೊಂದಿಗೆ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ತಡೆಗೋಡೆ ನಿರ್ಮಾಣ, ಸಾಯಿ ಕ್ರೀಡಾಂಗಣ ರಸ್ತೆ ನಿರ್ಮಾಣಕ್ಕೆ ಮುಂದಾಗುವುದಾಗಿ ಹೇಳಿದರು. ಯುಜಿಡಿ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿ ಯುಜಿಡಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದೆಂದರು. ನೀರಿನ ಕೊರತೆ ನೀಗಿಸಲು ಕ್ರಮ ಮಡಿಕೇರಿ ನಗರದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಜಲ ಮೂಲಗಳ ಹೂಳೆತ್ತುವುದರೊಂದಿಗೆ ಕುಂಡಾಮೇಸ್ತ್ರಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೈಗೆತ್ತಿಕೊಳ್ಳಬೇಕಾದ ಕ್ರಮಗಳನ್ನು ಆದಷ್ಟು ಶೀಘ್ರ ಕೈಗೊಳ್ಳಲಾಗುವುದು ಎಂದ ರಾಮದಾಸ್ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೂ ಚಿಂತನೆ ನಡೆಸಲಾಗುವುದೆಂದರು.

ಕಸ ಕರಗಿಸಲು ಕ್ರಮ ಮಡಿಕೇರಿ ನಗರದ ಕಸವಿಲೇವಾರಿ ಸಂಬಂಧ ಸುಬ್ರಮಣ್ಯ ನಗರದ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೊರೆ ಹೋಗಿರುವ ವಿಚಾರ ತನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಆದೇಶದ ನಿರೀಕ್ಷೆಯೊಂದಿಗೆ ಸುಬ್ರಮಣ್ಯ ನಗರದಲ್ಲಿ ಹಾಕಲಾಗುವ ಕಸಗಳನ್ನು ಕರಗಿಸಲು, ಅಲ್ಲಿ ಕೆಟ್ಟು ನಿಂತಿರುವ ಯಂತ್ರಗಳ ಸದ್ಬಳಕೆಗೂ ಮುಂದಾಗುವುದಾಗಿ ಆಯುಕ್ತರು ನುಡಿದರು. ಕೋಟಿಗಟ್ಟಲೆ ಖರ್ಚುಮಾಡಿ ನಿರ್ಮಿಸಲಾದ ಮಡಿಕೇರಿ ಮಾರುಕಟ್ಟೆ ಕಟ್ಟಡವನ್ನು ಪರಿಶೀಲನೆ ನಡೆಸಿ ಅದು ವ್ಯಾಪಾರಿಗಳಿಗೆ, ಜನರಿಗೆ ಸದ್ಬಳಕೆಯಾಗು ವಂತೆ ಖಂಡಿತವಾಗಿ ಮಾಡುತ್ತೇನೆ ಎಂದೂ ಅವರು ಭರವಸೆಯಿತ್ತರು.

ಖುದ್ದು ಪರಿಶೀಲಿಸಿ ಅನುಮತಿ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮದಾಸ್ ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ವೇಳೆ ತಾನೇ ಖುದ್ದು ಸ್ಥಳ ಪರಿಶೀಲಿಸಿ ಕಾನೂನು ಪ್ರಕಾರ ಅನುಮತಿ ನೀಡಲು ಮುಂದಾಗುತ್ತೇನೆ. ಅಕ್ರಮವಾಗಿ ತಲೆ ಎತ್ತುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸದ್ಯದಲ್ಲೇ ದಸರಾ ಸಭೆ

ಈ ಬಾರಿಯ ದಸರಾ ಉತ್ಸವ ಸಂಬಂಧ ಆಚರಣೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸದ್ಯದಲ್ಲಿಯೇ ದಸರಾ ಸಂಬಂಧ ಸಭೆ ಕರೆಯುತ್ತೇನೆ ಎಂದು ಹೇಳಿದ ಆಯುಕ್ತರು, ರಾಜಾಸೀಟಿನಲ್ಲಿ ಕೆಟ್ಟು ನಿಂತಿರುವ ಪುಟಾಣಿ ರೈಲನ್ನು ಸರಪಡಿಸಲು ಸಂಬಂಧಿಸಿದವರೊಂದಿಗೆ ಮಾಹಿತಿ ಪಡೆದು ಮುಂದಡಿಯಿಡುತ್ತೇನೆ ಎಂದು ಹೇಳಿದರು.

ಜನಪರ ಕಾರ್ಯಗಳಿಗೆ ಒತ್ತು

ಮಡಿಕೇರಿ ನಗರಸಭೆ ಇದುವರೆಗೆ ಹೇಗಿತ್ತೋ ಗೊತ್ತಿಲ್ಲ. ಆದರೆ ಇನ್ನು ಮುಂದೆ ನಗರಸಭೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸದಭಿಪ್ರಾಯ ಮೂಡಬೇಕು. ಆ ರೀತಿಯಲ್ಲಿ ನಗರಸಭೆಯನ್ನು ಮುನ್ನಡೆಸುತ್ತೇನೆ. ಜನಪರ ಕಾರ್ಯಗಳು ವಿಳಂಬವಾಗದಂತೆ; ಜನರಿಗೆ ತೊಂದರೆಯಾಗದಂತೆ ನಗರಸಭೆಯ ಪ್ರತಿಯೊಬ್ಬ ಸಿಬ್ಬಂದಿಯೂ ಕೆಲಸ ಮಾಡಲಿದ್ದಾರೆ. ಈಗಾಗಲೇ ಈ ಬಗ್ಗೆ ಸಿಬ್ಬಂದಿಗೆ ನಿರ್ದೇಶನ ನೀಡಿದ್ದೇನೆ. ಹಲವು ವರ್ಷಗಳಿಂದ ಮಡಿಕೇರಿಯಲ್ಲಿ ನೆಲೆಸಿರುವ ತನಗೆ ಇಲ್ಲಿನ ಜನರ ನಾಡಿಮಿಡಿತದ ಅರಿವಿದೆ. ಆದ್ದರಿಂದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಆಯುಕ್ತ ರಾಮದಾಸ್ ಆಶ್ವಾಸನೆಯಿತ್ತರು. ನಗರದ ಅನೇಕ ಸ್ಥಳಗಳಲ್ಲಿನ ಉದ್ಯಾನವನಕ್ಕೆ ಮೀಸಲಿಟ್ಟ ಜಾಗಗಳನ್ನು ಉದ್ಯಾನವಾಗಿ ಪರಿವರ್ತಿಸಿ ನಾಗರಿಕರಿಗೆ ವಿರಾಮ ಧಾಮದ ಅನುಕೂಲ ಕಲ್ಪಿಸುವ ಉದ್ದೇಶವೂ ಇದೆ ಎಂದರು.

-ಉಜ್ವಲ್ ರಂಜಿತ್.