ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕೋವಿಡ್
ಬೆಂಗಳೂರು, ಆ. 30: ರಾಜ್ಯದಲ್ಲಿ ರಾಜಕಾರಣಿಗಳಿಗೆ ಕೊರೊನಾ ಸೋಂಕು ತಗುಲುತ್ತಿದ್ದು, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ನಳಿನ್ಕುಮಾರ್ ಟ್ವೀಟ್ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ, ಆದರೆ ರೋಗ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ. ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರೆಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಗೋಹತ್ಯೆ ನಿಷೇಧಿಸಲು ಮನವಿ
ಚಿಕ್ಕಬಳ್ಳಾಪುರ, ಆ. 30: ಮನೆ ಸದಸ್ಯನಂತಿರುವ ಗೋವನ್ನು ಹತ್ಯೆ ಮಾಡುವುದು ಮಹಾಪಾಪ. ಗೋಹತ್ಯೆ ನಿಷೇಧಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಜಾಗೃತಿ ಆಂದೋಲನವನ್ನು ಕೂಡ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಗೋಹತ್ಯೆಯನ್ನು ಎಲ್ಲ ಸರ್ಕಾರಗಳು ನಿಷೇಧಿಸಬೇಕು ಎಂದರು.
ಪಾಕ್ ದಾಳಿಗೆ ಯೋಧ ಹುತಾತ್ಮ
ಜಮ್ಮು, ಆ. 30: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೇನಾಪಡೆಯ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿ ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ. ಜಮ್ಮು-ಕಾಶ್ಮೀರದ ನೌಶೆರಾ ವಲಯದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇಂದು ಶಂಕಾಸ್ಪದ ಚಲನವಲನಗಳು ಕಂಡುಬಂದವು. ತಕ್ಷಣವೇ ಗುಂಡಿನ ದಾಳಿ ಆರಂಭ ವಾಯಿತು. ಇದಕ್ಕೆ ಭಾರತೀಯ ಸೇನಾಪಡೆ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಗುಂಡೊಂದು ಕಿರಿಯ ನಿಯೋಜಿತ ಅಧಿಕಾರಿ ನವಾಬ್ ಸುಬೇದಾರ್ ರಜ್ವೀಂದರ್ ಸಿಂಗ್ ಅವರ ಮೇಲೆ ಬಿದ್ದಿತು. ತೀವ್ರವಾಗಿ ಗಾಯಗೊಂಡ ಅವರು ನಂತರ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.
ಇಂದು ಪ್ರಶಾಂತ್ ಭೂಷಣ್ ಶಿಕ್ಷೆ ಪ್ರಕಟ
ನವದೆಹಲಿ, ಆ. 30: ಅಡ್ವೊಕೇಟ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಆರು ತಿಂಗಳು ಜೈಲುಶಿಕ್ಷೆ ಅಥವಾ 2 ಸಾವಿರದವರೆಗೆ ದಂಡ ಅಥವಾ ದಂಡ ಮತ್ತು ಜೈಲುಶಿಕ್ಷೆ ಎರಡೂ ಶಿಕ್ಷೆಯನ್ನು ನ್ಯಾಯವಾದಿ ಪ್ರಶಾಂತ್ ಭೂಷಣ್ ಎದುರಿಸಬೇಕಾಗಬಹುದು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿ ಅಡ್ವೊಕೇಟ್ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು ವಿವಾದವೆಬ್ಬಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರನ್ನು ಅಪರಾಧಿ ಎಂದು ತೀರ್ಮಾನ ಮಾಡಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಅದಕ್ಕೆ ನಂತರ ಅವರು ಕ್ಷಮೆ ಕೋರಲು ನಿರಾಕರಿಸಿದ್ದರು.