ಕೊಡವರ ಮೂಲ : ಕೊಡವರ ಮೂಲದ ಬಗ್ಗೆ ಒಟ್ಟು ಹನ್ನೊಂದು ಸಿದ್ದಾಂತಗಳಿವೆ. ಇತಿಹಾಸಕಾರರು, ಮಾನವಕುಲ ಸಂಶೋಧಕರು, ಭಾಷಾತಜ್ಞರು, ಪ್ರವಾಸಿಗರು ಮತ್ತು ವ್ಯರ್ಥ ಹರಟೆ ಕೋರರು ತಮ್ಮ ತಮ್ಮ ಮನಸ್ಸಿಗೆ ತೋಚಿದಂತೆ ವ್ಯಾಖ್ಯಾನಿಸುವುದು ಮತ್ತು ದಾಖಲಿಸಿಡುವುದು ವಿದ್ವಾಂಸರೆನಿಸಿಕೊಂಡವರ ಹವ್ಯಾಸ !
ಒಂದು ಸಿದ್ಧಾಂತದ ಪ್ರಕಾರ ಕೊಡವರು ಚಂದ್ರವರ್ಮನ (ಕ್ಷತ್ರಿಯನ) ವಂಶಸ್ತರೆಂದು ವಾದಿಸುವವರನ್ನು ನಂಬುವರು. ಸ್ಕಾಂದ ಪುರಾಣದಲ್ಲಿ ಗರ್ಭಿತವಾಗಿರುವ ಕಾವೇರಿ ಪುರಾಣವನ್ನು ಅನುಸರಿಸುವರು.
ಕಾವೇರಿ ಪುರಾಣದ ಆದಿಯಿಂದ ಅಂತ್ಯದವರೆಗೆ ಕೊಡವರ ‘ಬಾಳೋಪಾಟ್’ನಲ್ಲಿದೆ. ಅದರ ಕೈಬರಹದ ಸಂಪೂರ್ಣ ಪಠ್ಯ 1951ರ ತನಕ ನನ್ನ ಮನೆಯಲ್ಲಿತ್ತು. ನನ್ನ ತಂದೆ ಬರೆದದ್ದು, ಅನಂತರ ಯಾರ್ಯಾರೋ ಕೊಂಡೊಯ್ದು ಕಾಣೆ ಮಾಡಿದರು.
ಕಾವೇರಿಯಲ್ಲಿ ಬಾಳೋ ಪಾಟ್ : ಪ್ರತಿ ನಾಡಿನಿಂದ ಖ್ಯಾತ ಬಾಳೋಪಾಟ್ಕಾರರು ಮಹಾ ಶಿವರಾತ್ರಿಯ ದಿನ ಭಾಗಮಂಡಲದಲ್ಲಿ ಕಲೆತು, ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದ ತನಕ ಕಾವೇರಿ ಪುರಾಣವನ್ನು ದುಡಿಬಾರಿಸುತ್ತಾ ಹಾಡುವ ಕ್ರಮವಿತ್ತು. 1940ನೇ ಇಸವಿ ಯಿಂದ ಆ ವಿಧದ ಕಾವೇರಿ ಸೇವೆ ಕ್ಷೀಣವಾಗುತ್ತಾ ಬಂತು. ಹರಕೆ ಒಪ್ಪಿಸಲು ಮಾತ್ರ ಎಂಬಂತೆ ರಾತ್ರಿ ಸ್ವಲ್ಪ ಸಮಯದ ತನಕ ಮಾತ್ರ ಹಾಡಿ ಮುಗಿಸುವ ಕ್ರಮ ಬಂತು.
ಹಬ್ಬದಾಚರಣೆ : ನಾನರಿತ ಮಟ್ಟಿಗೆ ಕೊಡವರು ಮಾತ್ರವಲ್ಲದೆ ಕೊಡವ ಭಾಷಿಕ ಮೂಲನಿವಾಸಿಗಳು ಮತ್ತು ಕೊಡಗಿನ ಅರೆಭಾಷೆ ಗೌಡ ಸಮುದಾಯದವರು ಕೂಡ ಆಚರಿಸುತ್ತಾರೆ. ಆಚರಣೆಯ ವಿಧಾನದಲ್ಲಿ ವ್ಯತ್ಯಾಸವಿರಲಿಲ್ಲ.
ತೀರ್ಥೋದ್ಭವಕ್ಕೆ ಎರಡು ಅಥವಾ ಮೂರು ದಿವಸಕ್ಕೆ ಮೊದಲು ಕಾಡಿನಲ್ಲಿ ಬೆಳೆಯುವ ‘‘ಬೊತ್ತ್’’ ಎಂಬ ಮರದ ಕೊಂಬೆಗಳನ್ನು ಕಡಿದು ತಂದು, ವಿಶಾಲವಾದ ಗದ್ದೆಗಳ ಮಧ್ಯೆ ಮೂರು ಮೂರರಂತೆಯೂ, ಸಣ್ಣ-ಪುಟ್ಟ ಗದ್ದೆಗಳಿಗೆ ಒಂದರಂತೆಯೂ ಊರಿ ಇಡಬೇಕು. ಕೆಲವು ಊರುಗಳಲ್ಲಿ ಬಿದಿರನ್ನು ಊರುವ ಕ್ರಮವು ಇದೆ. ಕೆಲವೆಡೆ ‘‘ಕಾಂಡ’’ ಎಂಬ ಮೃದು ಗಿಡದ ದಂಟನ್ನೂ ಊರುವುದಿದೆ. ಈ ವ್ಯತ್ಯಾಸ ಏಕೆಂದು ಸ್ಪಷ್ಟೀಕರಣ ಕೊಡುವವರಿಲ್ಲ.
ಬೊತ್ತ್ಬಳ್ಳಿ ಯಾನೆ ಕೈಬ್ಲಿ ಬಳ್ಳಿ : ಇದು ಬಳ್ಳಿಯೂ ಅಲ್ಲ, ಮರವೂ ಅಲ್ಲ. ಅದನ್ನು ‘ತಡೆ’ ಎನ್ನುವರು. ಬಳ್ಳಿಯಂತೆ ದೊಡ್ಡ ಮರಗಳ ತುದಿತನಕ ಹಬ್ಬಿ ಮರವನ್ನೇ ಚಪ್ಪರ ಹಾಕಿದಂತೆ ಆವರಿಸುತ್ತದೆ. ಅದರ ಹಣ್ಣು ಕಾಡುಬೆಕ್ಕು (ಕಬ್ಬೆಕ್ಕು) ಗಳಿಗೆ ಬಲು ಪ್ರೀತಿ, ಈ ಸಸ್ಯದ ಕಾಂಡ ಸುಮಾರು ಎರಡು ಅಡಿ ಸುತ್ತಳತೆ ಬೆಳೆಯುತ್ತದೆ. ಇದರ ರೆಂಬೆಗಳು ಮಾತ್ರ ಬಳ್ಳಿಯಂತಿರುವುದು. ಅದನ್ನು ತಂದು ವೃತ್ತಾಕಾರವಾಗಿ ಸುತ್ತಿ ಚುಚ್ಚಿದ ‘ಬೊತ್ತ್’ನ ಮೇಲೆ ಭದ್ರ ಪಡಿಸಿಡುವುದು.
ಹಬ್ಬದಾಚರಣೆ : ಮಧ್ಯರಾತ್ರಿ ಕಳೆದ ಮೇಲೆ ತೀರ್ಥೋದ್ಭವ ಆದರೆ ಮರುದಿನ ಆಚರಣೆ. ಒಂದು ದಿನಕ್ಕೆ ಮೊದಲು ದೋಸೆಗೆ ಕಡೆದಿಡಬೇಕು. ತೀರ್ಥೋದ್ಭವ ಆದ ಮರುದಿನ ಮುಂಜಾನೆ ಮನೆಮಂದಿಯೆಲ್ಲ ಸ್ನಾನ ಮುಗಿಸಬೇಕು. ಮನೆಯ ಮುತ್ತೈದೆ ನಡುಮನೆಯಲ್ಲಿ ಅಥವಾ ಕನ್ನಿಕೋಂಬರೆ ಎಂಬ ಪೂಜಾ ಕೋಣೆಯಲ್ಲಿ ಕಣಿಪೂಜೆಗೆ ಅಣಿ ಮಾಡಬೇಕು.
ಕಣಿ : ಅರ್ಥಾತ್ ಕಾವೇರಿ ಮಾತೆಯ ವಿಗ್ರಹ. ಒಂದು ಹರಿವಾಣದಲ್ಲಿ ಅಕ್ಕಿ ತುಂಬಿಸಿ, ಅದರ ಮೇಲೆ ತೆಂಗಿನಕಾಯಿ (ಅಥವಾ) ಸೌತೆಕಾಯಿ ಇರಿಸಿ, ಹೂವಿನಿಂದ ಅಲಂಕರಿಸಿ, ವಿಗ್ರಹದ ರೂಪ ಕೊಟ್ಟು, ಕರಿಮಣಿ ಸರವನ್ನು ತೊಡಿಸಿ, ಪಕ್ಕದಲ್ಲಿ ವೀಳ್ಯದೆಲೆ ಅಡಕೆ ಇಟ್ಟು, ಕುಂಕುಮ ಶ್ರೀಗಂಧವನ್ನು ಇರಿಸಿ ದೀಪ ಉರಿಯುತ್ತಿರಬೇಕು. ಪಕ್ಕದಲ್ಲಿ ಕಾವೇರಿಯಿಂದ ತಂದ ತೀರ್ಥವನ್ನಿಟ್ಟಿರಬೇಕು. (ಕಲಶ ಪಾತ್ರೆಯಂತೆ)
ಬೊತ್ತ್ನಲ್ಲಿ ಕಾವೇರಿ ಮಾತೆಗೆ ಪ್ರಸಾದ :- ಸೂರ್ಯೋದಯದ ವೇಳೆಗೆ ಮೂರು ದೋಸೆಗಳನ್ನು ತಯಾರಿಸಿ, ಬಾಳೆಲೆಯಲ್ಲಿರಿಸಿ, ಅದರ ಮೇಲೆ ತೆಂಗಿನಕಾಯಿ ಚೂರು, ಬಾಳೆಹಣ್ಣು ಮತ್ತು ಉರಿಯುವ ಬತ್ತಿಯನ್ನಿರಿಸಿದ್ದನ್ನು ಮನೆಯ ಯಜಮಾನ ಪ್ರಧಾನವಾದ ಗದ್ದೆಗೆ ಕೊಂಡೊಯ್ಯಬೇಕು. ‘‘ಬೊತ್ತು’’ ನಿಲ್ಲಿಸಿ ಕೈಬ್ಲಿ ಬಳ್ಳಿ ಸುತ್ತಿದುದರ ಮೇಲೆ ಪೂರ್ವಾಭಿಮುಖವಾಗಿರಿಸಿ ಕೈಮುಗಿದು ಹೀಗೆ ಹೇಳಬೇಕು. ‘‘ಮಾತಾಯಿ ಕಾವೇರಮ್ಮೆ ಓರಾಂಡೆಕೊಮ್ಮ ತೊಲಿಯಾರ್ ಚಂಗ್ರಾದಿರಂದ್ ತೀರ್ಥರೂಪತ್ಲ್ ಕಾಂಬ್ಚಿಟ್ಟಂಡ್, ಪೊಮ್ಮಾಲೆ ಕೊಡಗ್ನ ಕಾಲಕೊತ್ತನೆಕೆ ಮಳೆಬೊಳೆ ತಂದಿತ್, ನಾಡ್ರ ಕುಂಞÂಯಳ ಚಾಕಿ ಪೊಲತುವಿಂದ್ ಭಾಷೆ ತಂದ ಪೋಲೆ ಇಂದಿಕ ನೀಡ ಅವತಾರ ಕಾಟಿತುಳ್ಳಿಯ. ಕ್ೀನಾಳ್ ನಡಪೋಲೆ ನಂಗ ಕಾವೇರಮ್ಮೆರ ಭೂಮಿಲ್ ಪೊಂಗಬೊತ್ತ್ ನಟ್ಟಿತ್ ಕೈಬ್ಲಿ ಬಳ್ಳಿ ತೊರತಿತ್, ಪಣ್ಣ್ಫಲವಾಯಿ ಎಡೆಬೆಚ್ಚವ. ಬೆಚ್ಚ ಎಡೆ ಬೇಂಗಿತ್, ಈ ನಾಡ್ಲ್ ಕಾಯಕಷ್ಟ ಬರತೆನ್ನಕೆ ಕಾಪಾಡಿತ್, ಮಾಲೋಂಗ ಬೊಳೆಂದಾನಕ ಮಾತಾಯಿ ಬೇಲಿದಾಯಿತ್ ಕಾತ್ರಕ್ಷಣೆ ಮಾಡಿತ್, ಆಳ್ಕೂ ಅಡಿಯಾಳ್ಕೂ, ಅತ್ತ್ಕಡಚಿಯಕೂ, ಬಿತ್ತ್ಬೊಳೆಕೂ ಪೋಪಲ್ಲಿಕೂ, ಬಪ್ಪಲಿಕೂ, ಬಾಯಿಲ್ ನಾವುಕೂ ಬಲತೇ ಕೈಕೂ ಉದಿಪೂ, ಮದಿಪೂ ತಂದಂಡ್ ಆಳ್ಬಯ್ಯ ನೆಳಪೋಲೆ ಕಾತ್ ಕಾಪಾಡಿಯಾಂದ್ ಬೋಡಿಯವ’’ ಎಂದು ಹೇಳಿ ಮೂರು ಬಾರಿ ಚಪ್ಪಾಳೆ ತಟ್ಟಿ ಮನೆಗೆ ಬಂದು ‘ಕಣಿ’ಗೆ ಅಕ್ಕಿ ಹಾಕಿ, ಅದಾಗಲೇ ಕಾವೇರಿ ತೀರ್ಥ ಬಂದು ತಲಪಿದ್ದರೆ ಕಣಿಗೆ ತೀರ್ಥ ಪ್ರೋಕ್ಷಿಸಿ, ಸೇವಿಸುವರು. ಆದರೆ, ಹಿಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಬರುತ್ತಿದ್ದುದರಿಂದ ಅದಕ್ಕಾಗಿ ಕಾಯಬೇಕಿರಲಿಲ್ಲ. ಕಣಿ ಇರಿಸಿದ್ದು 3 ದಿವಸಗಳ ತನಕ ಇರುತ್ತಿತ್ತು. ಯಾತ್ರಾರ್ಥಿಗಳು ತೀರ್ಥ ತಂದು ತಲಪಿಸಿದ ಮೇಲೆ ತೀರ್ಥ ಪ್ರೋಕ್ಷಣೆ ಮತ್ತು ಸೇವನೆ ಮಾಡಬಹುದು.
ಕಣಿ ಪೂಜಿದ್ದಕ್ಕೆ ಮನೆಯ ಪ್ರತಿಯೊಬ್ಬರೂ ಅಕ್ಷತೆ ಹಾಕಿ ಮೂರು ಬಾರಿ ಸ್ಪರ್ಶಿಸಿ ನಮಿಸಿ ಪ್ರತಿಯೊಬ್ಬ ಕಿರಿಯನೂ ಪ್ರಾಯದಲ್ಲ್ಲಿ ಹಿರಿಯರಾದವರೆಲ್ಲರ ಪಾದಸ್ಪರ್ಶಿಸಿ ವಂದಿಸಬೇಕು. ಪೂಜಿದ ಕಣಿ (ಕೃತಕ ವಿಗ್ರಹ)ಯನ್ನು ಕೆಲವರು ಮರುದಿವಸವೇ ಹರಿಯುವ ನದಿಯಲ್ಲಿ ವಿಸರ್ಜಿಸುತ್ತಾರೆ. ಕೆಲವು ಕುಟುಂಬಗಳಲ್ಲಿ ಮೂರು ದಿವಸದ ನಂತರ ವಿಸರ್ಜಿಸುತ್ತಾರೆ. ಆದರೆ ಕಣಿ ಪ್ರತಿಷ್ಠಾಪಿಸಿ ವಿಸರ್ಜಿಸುವ ತನಕ ಮಧು ಮಾಂಸಾದಿಗಳು ಸರ್ವತ್ರ ವಜ್ರ್ಯ. ಕೈಮಡ ಇರುವ ಮನೆಗಳಲ್ಲಿ ತಂದ ತೀರ್ಥವನ್ನು ‘ಮೀದಿ’ ಇಡಲೇ ಬೇಕು. ಬಾಕಿ ತೀರ್ಥವನ್ನು ವರ್ಷಾನುಗಟ್ಟಲೆ ರಕ್ಷಿಸಿಡುವ ಕ್ರಮ ಪ್ರತಿ ಮನೆಯಲ್ಲೂ ಇದೆ. ವ್ಯಕ್ತಿಯೊಬ್ಬ ಕೊನೆಯುಸಿರೆಳೆದು ಜೀವ ಹೋಗುವಾಗ ಕಾವೇರಿ ತೀರ್ಥ ಕುಡಿಸುವುದು ಪ್ರಾಚೀನ ಕಾಲದಿಂದ ಬಂದ ಸಂಪ್ರದಾಯ.
ಕಾವೇರಿ ತೀರ್ಥಯಾತ್ರೆ : ಹಿರಿಯರು ಸತ್ತಲ್ಲಿ ದೀಕ್ಷೆ ಇರುವವರು (ತ್ೀಕೆಕಾರ ಕೊಡವ ಭಾಷೆಯಲ್ಲಿ ತ್ೀಕೆ ಎಂದರೆ ದೀಕ್ಷೆ) ಕಾವೇರಿಗೆ ಹೋಗಿ ತಮ್ಮ ದೀಕ್ಷೆಯನ್ನು ಕಳಚಲೇ ಬೇಕು. ತಂದೆ-ತಾಯಿಗೆ ಹಿರಿ ಮಗ ಇಲ್ಲವೆ ಹಿರಿ ಮಗಳು, ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ, ಅಂತ ಸಂಬಂಧಿಕರು ಇಲ್ಲದೆ ಹೋದರೆ ಇತರ ಸಮೀಪ ಬಂಧುಗಳು ದೀಕ್ಷೆ ತೆಗೆದುಕೊಳ್ಳಬಹುದು. ಒಬ್ಬರೇ ದೀಕ್ಷೆ ನಿಲ್ಲಬೇಕೆಂದಿಲ್ಲ. ಗಂಡ ಸತ್ತರೆ ಪತ್ನಿ ಮತ್ತು ಮಗ ಇಬ್ಬರೂ ವ್ರತ ಆಚರಿಸಬಹುದು.
ಸತ್ತ ಮರು ದಿವಸದಿಂದ ದೀಕ್ಷೆಯಲ್ಲಿರುವವರು ಒಪ್ಪತ್ತು ಊಟ, ಗಂಡಸರಾದರೆ ತಲೆ ಬೋಳಿಸಿರಬೇಕು. ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡುವ ತನಕ ಸಂಪೂರ್ಣ ಸಸ್ಯಾಹಾರ ಮಾಡಬೇಕು. ಹಾಲು, ಮೊಸರು, ತುಪ್ಪ, ಜೇನು ಮತ್ತು ಮದ್ಯ, ಮಾಂಸ ಸೇವನೆ ಕೂಡದು. ಬಿಳಿ ಅಂಗಿ ಮಾತ್ರ (ಪಂಚೆ)ಧರಿಸಿ ಗಡ್ಡ ಮೀಸೆ, ಕೂದಲು ಕತ್ತರಿಸುವಂತಿಲ್ಲ. ಮಹಿಳೆಯರಾದರೆ ತಲೆಗೂದಲು ಬಾಚಬಾರದು, ಜಡೆ ಹೆಣೆಯಬಾರದು (ಹಿಂದಿನ ಕಾಲದಲ್ಲಿ ಜಾಕೀಟು ಹಾಕುವಂತಿರಲಿಲ್ಲ) ಹೆಗಲು ಮತ್ತು ಸೊಂಟದ ಮೇಲ್ಭಾಗ ಮುಚ್ಚುವಂತೆ ಬಿಳಿಯ ವಸ್ತ್ರವನ್ನು ಹೊದ್ದುಕೊಂಡಿರಬೇಕು. ಮೃತರ ತಿಥಿ ಕರ್ಮಾಂತರ 12ನೇ ದಿನ ಕಳೆದ ಮೇಲೆ 16 ದಿವಸ ಕಳೆದು ಯಾವಾಗ ಬೇಕಾದರೂ ಹೋಗಿ ಪಿಂಡಪ್ರದಾನ ಮಾಡಿ, ಗಂಡಸರಾದರೆ ತಲೆ ಬೋಳಿಸಿ ಬರಬೇಕು. ಮೃತನ ಅಸ್ಥಿಯನ್ನು ಸ್ವಲ್ಪಕೊಂಡು ಹೋಗಿ ಸಂಗಮದಲ್ಲಿ ವಿಸರ್ಜಿಸಬೇಕು.
ಮೃತನ ಕಾಲದಲ್ಲಿ ಯಾವುದಾದರೂ ಹರಕೆ ಕಟ್ಟಿದ್ದು ಇದ್ದರೆ ಸಂಗಮದಲ್ಲಿ ಮುಳುಗುವಾಗ ಬಿಟ್ಟುಬಿಡಬೇಕು. ದೀಕ್ಷೆ ಬಿಚ್ಚಿದ ನಂತರ ವಿಧವೆಯಾದವಳು ಬಿಳಿ ಸೀರೆ ಮಾತ್ರ ಉಡಬೇಕಿತ್ತು. (ಈಗ ಆ ನಿಯಮವಿಲ್ಲ) ಮೃತನ ಸಣ್ಣದೊಂದು ಬೆಳ್ಳಿಯ ಪ್ರತಿಮೆಯನ್ನು ತಲಕಾವೇರಿಯ ಕೊಳದಲ್ಲಿ ಹಾಕುವ ಕ್ರಮವಿದೆ.
(ಮುಂದುವರಿಯುವುದು)