ಸೋಮವಾರಪೇಟೆ,ಆ.28: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣಗಳ ಬಗ್ಗೆ ಹಲವಷ್ಟು ಸಭೆ ಸಮಾರಂಭಗಳಲ್ಲಿ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಇಡೀ ಜಿಲ್ಲೆಯಲ್ಲಿಯೇ ಇಷ್ಟೊಂದು ವಾಣಿಜ್ಯ ಸಂಕೀರ್ಣಗಳನ್ನು ಹೊಂದಿದ ಪ.ಪಂ. ಇಲ್ಲ ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಭಾಗದಲ್ಲೇ ಇರುವ ವಾಣಿಜ್ಯ ಸಂಕೀರ್ಣಗಳು ಶಾಸಕರ ಮಾತಿಗೆ ಮುಸಿಮುಸಿ ನಗುತ್ತಿವೆ!

ಹೌದು, ಜಿಲ್ಲೆಯ ಮಟ್ಟಿಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹೊಂದಿರುವಷ್ಟು ವಾಣಿಜ್ಯ ಮಳಿಗೆಗಳನ್ನು ಬೇರೆ ಯಾವ ಪಂಚಾಯಿತಿಯೂ ಹೊಂದಿಲ್ಲ. ಇಲ್ಲಿನ ಖಾಸಗಿ ಬಸ್ ನಿಲ್ದಾಣ, ಸಿ.ಕೆ. ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆಗಳಲ್ಲಿ ನೂರಕ್ಕೂ ಅಧಿಕ ವಾಣಿಜ್ಯ ಸಂಕೀರ್ಣಗಳನ್ನು ಪಂಚಾಯಿತಿ ಹೊಂದಿದೆ.

ಇದರೊಂದಿಗೆ ಹೈಟೆಕ್ ಮಾರುಕಟ್ಟೆಗೆ ಒತ್ತಿಕೊಂಡಂತೆ ಇರುವ ಮೀನು-ಮಾಂಸ ಮಾರಾಟ ಮಳಿಗೆಗಳೂ ಪಂಚಾಯಿತಿಯ ಆಸ್ತಿಯೇ ಆಗಿದೆ. ಈ ಸಂಕೀರ್ಣಗಳು ಅಪ್ಪಚ್ಚು ರಂಜನ್ ಅವರು ಶಾಸಕರಾದ ಸಂದರ್ಭವೇ ನಿರ್ಮಾಣವಾಗಿದ್ದು, ಇದರಲ್ಲಿ ಎರಡು ಮಾತಿಲ್ಲ.

ಪಟ್ಟಣ ಪಂಚಾಯಿತಿಗೆ ಶಾಸಕರ ನಿಧಿ, ರಾಜ್ಯ, ಕೇಂದ್ರ ಸರ್ಕಾರದಿಂದ ವಿವಿಧ ಮೂಲದಲ್ಲಿ ಹರಿದು ಬಂದ ಅನುದಾನದಡಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಕೊಡುಗೆಯೂ ಹೆಚ್ಚಿದೆ. ಕಳೆದೆರಡು ವರ್ಷಗಳ ಹಿಂದೆಯಷ್ಟೇ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಶಾಸಕರೇ ಇದನ್ನು ಉದ್ಘಾಟಿಸಿದ್ದಾರೆ. ಈ ಕಟ್ಟಡದಲ್ಲೂ ವಾಣಿಜ್ಯ ಮಳಿಗೆಗಳಿವೆ.

ಒಂದು ಬದಿಯಲ್ಲಿ ನೂತನವಾಗಿ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗುತ್ತಿದ್ದರೆ, ಮತ್ತೊಂದು ಬದಿಯಲ್ಲಿ ನಿರ್ಮಾಣವಾಗಿರುವ ಮಳಿಗೆಗಳು ಪುಂಡ ಪೋಕರಿಗಳ ಮೋಜಿನ ತಾಣ, ಕುಡುಕರ ಅಡ್ಡೆಯಾಗಿ ಬಳಕೆಯಾಗುತ್ತಿರುವದು ಮಾತ್ರ ವಿಪರ್ಯಾಸವೇ ಸರಿ.

ಇದಕ್ಕೆ ಸ್ಪಷ್ಟ ಉದಾಹರಣೆಯಂತಿದೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿಯೇ ಇರುವ ವಾಣಿಜ್ಯ ಸಂಕೀರ್ಣ. ಈ ಕಟ್ಟಡದಲ್ಲಿ 13 ಮಳಿಗೆಗಳಿದ್ದು, ಪ್ರತಿಯೊಂದು ಮಳಿಗೆಯೂ ಕುಡುಕರ ಕೇಂದ್ರವಾಗಿದೆ. ಈಗಂತೂ ಬಾರ್, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲದಿರುವದರಿಂದ, ಪಟ್ಟಣ ಪಂಚಾಯಿತಿಯ ಮಳಿಗೆಗಳೇ ಬಾರ್‍ಗಳಾಗಿ ಪರಿವರ್ತನೆಯಾಗಿದೆ.

ಕಳೆದ 2009-10ನೇ ಸಾಲಿನಲ್ಲಿ ಎಸ್‍ಎಫ್‍ಸಿ ಅನುದಾನದಡಿ ರೂ. 90 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಹೈಟೆಕ್ ಮಾರುಕಟ್ಟೆಗೆ ಅಭಿಮುಖವಾಗಿರುವ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಆದರೆ ಪಟ್ಟಣ ಪಂಚಾಯಿತಿ ಕಚೇರಿಗೆ ಅಭಿಮುಖವಾಗಿರುವ 13 ಮಳಿಗೆಗಳು ಇಂದಿಗೂ ಹಾಗೆಯೇ ಉಳಿದಿಕೊಂಡಿದ್ದು, ಕಳೆದ 10 ವರ್ಷಗಳಿಂದ ಬಳಕೆಯಾಗದೇ ಹಾಗೆಯೇ ಉಳಿದಿದೆ.

ಪ್ರಸ್ತುತ ವಾಣಿಜ್ಯ ಮಳಿಗೆಗಳ ಬಾಗಿಲುಗಳು ತುಕ್ಕು ಹಿಡಿದಿದ್ದು, ಹಾಳುಕೊಂಪೆಯಂತಾಗಿದೆ. ಪರಿಣಾಮ ಸಂಜೆ ಕಳೆದು ರಾತ್ರಿಯಾಗುತ್ತಲೇ ಇಲ್ಲಿ ಕುಡುಕರು ಆಗಮಿಸಿ, ಮದ್ಯಸೇವನೆ ಮಾಡುತ್ತಿರುತ್ತಾರೆ. ಮಳಿಗೆಯ ಒಳಭಾಗದಲ್ಲಿಯೇ ಮಲಮೂತ್ರ ವಿಸರ್ಜನೆ, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೆ ಸ್ವತಃ ಪಟ್ಟಣ ಪಂಚಾಯಿತಿಯೇ ಆಸ್ಪದ ಮಾಡಿಕೊಟ್ಟಿದೆ.

ಕಳೆದ 10 ವರ್ಷಗಳಿಂದ 13 ಮಳಿಗೆಗಳು ಖಾಲಿ ಬಿದ್ದಿರುವದರಿಂದ ಪಟ್ಟಣ ಪಂಚಾಯಿತಿಗೆ ಲಕ್ಷಗಳ ಬದಲಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲದೇ, ಸರ್ಕಾರದ ಹಣದಲ್ಲಿ ಕುಡುಕರ ಅಡ್ಡೆಯನ್ನು ನಿರ್ಮಿಸಿದ ಅಪಕೀರ್ತಿಗೂ ಸೋಮವಾರಪೇಟೆ ಪ.ಪಂ. ಭಾಜನವಾಗಿದೆ.

ಶಾಸಕ ಅಪ್ಪಚ್ಚು ರಂಜನ್ ಅವರು ವಾಣಿಜ್ಯ ಸಂಕೀರ್ಣಗಳ ನಿರ್ಮಾಣದ ಬಗ್ಗೆ ತೆಗೆದುಕೊಂಡ ಕಾಳಜಿಯನ್ನು, ಅವುಗಳು ಸೂಕ್ತವಾಗಿ ಬಳಕೆಯಾಗುತ್ತಿವೆಯೇ? ವಾಣಿಜ್ಯ ಸಂಕೀರ್ಣದಿಂದ ಪ.ಪಂ.ಗೆ ಆದಾಯ ಬರುತ್ತಿದೆಯೇ? ಬಂದ ಆದಾಯದಿಂದ ಜನಪರ ಕಾರ್ಯಗಳು ನಡೆಯುತ್ತಿವೆಯೇ? ಎಂಬ ಬಗ್ಗೆ ಕನಿಷ್ಟ 1 ಗಂಟೆ ಸಭೆ ನಡೆಸಿದರೆ, ವಾಣಿಜ್ಯ ಸಂಕೀರ್ಣಗಳು ಪಂಚಾಯಿತಿಗೆ ಆದಾಯ ತರುವ ಮೂಲವಾಗಿ ಬದಲಾಗಲಿದೆ. ಇಲ್ಲವಾದಲ್ಲಿ ಮತ್ತದೇ ಪರಿಸ್ಥಿತಿ ಮುಂದುವರೆಯಲಿದೆ.

-ವಿಜಯ್