ಮಡಿಕೇರಿ, ಆ. 28: ಇಂಗ್ಲೆಂಡ್‍ನ ಲಂಡನ್‍ನಲ್ಲಿ ತಾ. 27 ರಂದು ನಡೆದ ಕಾರು ಅವಘಡದಲ್ಲಿ ಕೊಡಗು ಜಿಲ್ಲೆಯ ಯುವ ವೈದ್ಯರೊಬ್ಬರು ದುರ್ಮರಣ ಗೊಂಡಿರುವ ಘಟನೆ ನಡೆದಿದೆ. ಮೂಲತಃ ಟಿ. ಶೆಟ್ಟಿಗೇರಿ ಗ್ರಾ.ಪಂ.ನ ವೆಸ್ಟ್‍ನೆಮ್ಮಲೆ ಗ್ರಾಮದವರಾಗಿದ್ದ ಚೆಟ್ಟಂಗಡ ಡಾ. ಅಶ್ವಿನ್ ಚಂಗಪ್ಪ (26) ಮೃತಪಟ್ಟಿರುವ ಯುವವೈದ್ಯರಾಗಿದ್ದಾರೆ. ಚೆಟ್ಟಂಗಡ ತಮ್ಮಯ್ಯ ಹಾಗೂ ಸುನಿತಾ ದಂಪತಿಯ ಪುತ್ರ ಡಾ. ಅಶ್ವಿನ್ ಚಂಗಪ್ಪ ಕಳೆದ ಒಂದು ವರ್ಷದ ಹಿಂದೆಯಷ್ಟೆ ಲಂಡನ್‍ಗೆ ತೆರಳಿದ್ದರು ಎನ್ನಲಾಗಿದೆ.ಇವರ ಪೋಷಕರು ಹಾಗೂ ಸಹೋದರ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದಾರೆ. ಮೃತದೇಹವನ್ನು ಒಂದೆರಡು ದಿನದಲ್ಲಿ ಬೆಂಗಳೂರಿಗೆ ತಂದು ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವದು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅಶ್ವಿನ್ ಅವರು ಚಾಲಿಸುತ್ತಿದ್ದ ಕಾರಿಗೆ ಟ್ರಕ್ ಒಂದು ಅಪ್ಪಳಿಸಿದ್ದು, ಅವರ ಕತ್ತಿನ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು ಎನ್ನಲಾಗಿದೆ. ಬಳಿಕ ಅವರನ್ನು ಹೆಲಿಕಾಪ್ಟರ್ ಮೂಲಕ ‘ಲಿಫ್ಟ್’ ಮಾಡಿ ಆಸ್ಪತ್ರೆಗೆ ದಾಖಲಿಸಿ ಹಲವಾರು ವೈದ್ಯರ ತಂಡ ಚಿಕಿತ್ಸೆ ನೀಡಲು ಯತ್ನಿಸಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿರುವದಾಗಿ ತಿಳಿದು ಬಂದಿದೆ.

ವಾಹನ ಸಂಚಾರ ನಿಷೇಧ

ಮಡಿಕೇರಿ, ಆ.28: ವೀರಾಜಪೇಟೆ -ಬೈಂದೂರು ರಸ್ತೆಯ 27.00 ರಿಂದ 31.00 ಕಿ.ಮೀ.ರವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರಿಟಿಕರಣ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ಆಗಸ್ಟ್ 30ರಿಂದ ಅಕ್ಟೋಬರ್ 30 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಬದಲಿ ರಸ್ತೆಯಾದ ಮಡಿಕೇರಿ -ತಾಳತ್ತಮನೆ- ಮೇಕೇರಿ ಮಾರ್ಗವನ್ನು ಬಳಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ 1989ರ (ತಿದ್ದುಪಡಿ ನಿಯಮ 1990) ನಿಯಮ 221ಎ(2) ರಂತೆ ಅವಶ್ಯವಿರುವ ಸೂಚನಾ ಫಲಕವನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಜಿಲ್ಲಾ ಒಳನಾಡು ಜಲಸಾರಿಗೆ ಇಲಾಖೆ ಇವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.