ವೀರಾಜಪೇಟೆ, ಆ. 28: ಅಮ್ಮ ಕೊಡವರು ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಾವು ಸಿದ್ದರಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ಬೇಡಿಕೆ ಇಟ್ಟಿರುವುದನ್ನು ಕನ್ನಿ ಕಾವೇರಿ ಸೇವಾ ಟ್ರಸ್ಟ್ ಹಾಗೂ ವೀರಾಜಪೇಟೆ ತಾಲೂಕು ಹಿರಿಯ ನಾಗರಿಕ ವೇದಿಕೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಕನ್ನಿ ಕಾವೇರಿ ಟ್ರಸ್ಟ್‍ನ ಅಧ್ಯಕ್ಷ ಚೇಂದಂಡ ಚುಮ್ಮಿ ಪೂವಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2.12.97ರಲ್ಲಿ ಚೇರಂಗಾಲ ಗ್ರಾಮದ ದೈವಭಕ್ತ ದಿವಂಗತ ಹೊಸೂರು ಎಂ. ನಾಣಯ್ಯ ಅವರು, ಸುವರ್ಣ ಪ್ರಶ್ನೆ ಇಟ್ಟಲ್ಲಿ ಹಿಂದಿನ ಕಾಲದಲ್ಲಿ ತಲಕಾವೇರಿಯ ಕಾವೇರಮ್ಮನ ಪೂಜೆಯನ್ನು ಅಮ್ಮಕೊಡವರು ನಡೆಸುತ್ತಿದ್ದರು ಎಂಬುದಕ್ಕೆ ಆಧಾರ ಇದೆ. ಇವರ ಕಾರ್ಯಕ್ಕೆ ತೊಡಕು ಬಂದ ಕಾರಣ ಕಾವೇರಿ ತಾಯಿಯ ಪೂಜೆಯನ್ನು ಪಟ್ಟಮಾಡ ಕುಟುಂಬದವರು ನಡೆಸುತ್ತಿದ್ದರು ಎಂಬುದಾಗಿ ಉಲ್ಲೇಖ ಇದೆ ಎಂದರು.

ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮಾತನಾಡಿ ಕಾವೇರಿ ಮಾತೆಯ ಉಗಮ ಸ್ಥಾನ ಮತ್ತು ಭಗಂಡೇಶ್ವರ ದೇವಾಲಯದ ಪೂಜೆಯ ಜವಬ್ದಾರಿಕೆಯನ್ನು ಮಂಡಿರ ಹಾಗೂ ಮಣವಟ್ಟಿರ ಕುಟುಂಬದವರು ನಡೆಸುತ್ತಿದ್ದರು. ಆದಿಶಕ್ತಿ ಮಾತೆಗೆ ಸಹಕಾರಿಯಾಗಿ ಶತಮಾನಕ್ಕೆ ಒಬ್ಬರಂತೆ ಬಿದ್ದಂಡ ಬೋಪು, ಚಂಗೇಟಿರ ಅಪ್ಪಣ್ಣ ಅವರು ಇಗ್ಗುತಪ್ಪ ದೇವಸ್ಥಾನದ ಜವಬ್ದಾರಿಕೆಯನ್ನು ವಹಿಸಿದ್ದರು ಎಂಬದಾಗಿ ಉಲ್ಲೇಖಿಸಿದ್ದಾರೆ. ಅಮ್ಮ ಕೊಡವರು ಪೂಜಾ ಕಾರ್ಯಕ್ಕೆ ಮುಂದಾಗಿರುವದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕನ್ನಿಕಾವೇರಿ ಟ್ರಸ್ಟ್‍ನ ಕಾರ್ಯದರ್ಶಿ ಪುಚ್ಚಿಮಂಡ ಬಬುಲು ಅಪ್ಪಯ್ಯ, ಸಂಘಟಕರಾದ ಪುಚ್ಚಿಮಂಡ ಕಾವೇರಿ, ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಪುಲಿಯಂಡ ಪೊನ್ನಪ್ಪ ಉಪಸ್ಥಿತರಿದ್ದರು.