ಶನಿವಾರಸಂತೆ, ಆ. 27: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ವೀರಭದ್ರೇಶ್ವರ ಸ್ವಾಮಿ ಜಯಂತಿ ಆಚರಣೆಯೊಂದಿಗೆ ಕೊರೊನಾ ನಿಗ್ರಹ, ಪ್ರಕೃತಿ ವಿಕೋಪದಿಂದ ನಲುಗಿ ಹೋಗುತ್ತಿರುವ ಜಿಲ್ಲೆಯ ರಕ್ಷಣೆ ಹಾಗೂ ಸುಭಿಕ್ಷಾ ಕೊಡಗು ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ದೇವಾಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ರುದ್ರಾಭಿಷೇಕ, ಅಷ್ಟೋತ್ತರ ಇನ್ನಿತರ ವಿಶೇಷ ಪೂಜಾ ಕೈಂಕರ್ಯಗಳನ್ನು ಅರ್ಚಕ ಚಂದ್ರಯ್ಯ ನೆರವೇರಿಸಿದರು. ಪೂಜಾ ಸಂದರ್ಭ ಸಮಿತಿಯವರು ಮಾಡಿಕೊಂಡ ಸಂಕಲ್ಪಕ್ಕೆ ಸ್ವಾಮಿಯ ಪ್ರಸಾದವಾಗಿದ್ದು ಗ್ರಾಮದ 15-20 ಮಂದಿ ಭಕ್ತರು ಮಾಸ್ಕ್ ಧರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ಮಾಡಲಾಯಿತು.

ದೇವಾಲಯ ಸಮಿತಿ ಅಧ್ಯಕ್ಷ ಎನ್.ಎಸ್. ಜಯರಾಂ, ಕಾರ್ಯದರ್ಶಿ ಎನ್.ಎಂ. ಧರ್ಮಪ್ಪ, ಸದಸ್ಯರಾದ ಇಂದೂಶೇಖರ್, ಎನ್.ಎಸ್. ಬಸವರಾಜ್, ಎನ್.ಎನ್. ರಮೇಶ್, ಎನ್.ಜೆ. ವಾಸುದೇವ್, ಎನ್.ಎ. ಶಾಂತರಾಜ್, ಎನ್.ಯು. ರುದ್ದಪ್ಪ, ಎನ್.ಬಿ. ಗಣೇಶ್, ದೇವರ ಮನೆತನದ ಸಣ್ಣಯ್ಯ, ಕುಟುಂಬ ಮುಖಂಡರಾದ ಬಾಬುರಾಜೇಂದ್ರ ಪ್ರಸಾದ್, ಎನ್.ಎಸ್. ನಾಗರಾಜ್, ಎನ್.ಎ. ಲೋಕೇಶ್, ಉಮೇಶ್, ಎನ್.ಆರ್. ಮುತ್ತೇಗೌಡ, ಉಮೇಶ್ ಹಾಜರಿದ್ದರು.