ಸೋಮವಾರಪೇಟೆ, ಆ. 27: ಕೊರೊನಾ ವೈರಸ್ ಹರಡುವ ಆತಂಕದ ನಡುವೆಯೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಶಾಲೆಗಳು ಪ್ರಾರಂಭವಾಗಿವೆ ಎಂದು ಆರೋಪಿಸಿರುವ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದೆ.

ಶನಿವಾರಸಂತೆ ಹೋಬಳಿಯಲ್ಲಿ ಕೆಲವು ಖಾಸಗಿ ಶಾಲೆಗಳು ಪ್ರಾರಂಭವಾಗಿದ್ದು, ಈಗಾಗಲೇ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಯಾವದೇ ಚಟುವಟಿಕೆ ನಡೆಯುತ್ತಿಲ್ಲ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬೇರೆ ಬೇರೆ ಕಾನೂನಿದೆಯೇ ಎಂದು ಪ್ರಶ್ನಿಸಿರುವ ಕರವೇ ಅಧ್ಯಕ್ಷ ಫ್ರಾನ್ಸಿಸ್, ತಕ್ಷಣ ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಶಾಲೆಗಳಲ್ಲಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಈವರೆಗೆ ಯಾವದೇ ಮಾರ್ಗಸೂಚಿ ನೀಡಿಲ್ಲ. ಆದರೂ ಸಹ ಖಾಸಗಿ ಶಾಲೆಗಳು ಮಕ್ಕಳ ಆರೋಗ್ಯದ ಹಿತದೃಷ್ಟಿಯನ್ನು ಮರೆತು, ಸರ್ಕಾರದ ಆದೇಶವನ್ನೂ ಗಾಳಿಗೆ ತೂರಿ ತರಗತಿಗಳನ್ನು ನಡೆಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೂ ಗಮನಹರಿಸಬೇಕೆಂದು ಸಂಘಟನೆಯ ಕಾರ್ಯಕರ್ತರು ಮನವಿ ಮಾಡಿದ್ದಾರೆ.