ಪೆÇನ್ನಂಪೇಟೆ, ಆ. 27: ಕಳೆದ 5 ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಖಾಸಗಿ ಬಸ್ ಒಳಗೊಂಡಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಓಡಾಟ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಇದೀಗ ಗೋಣಿಕೊಪ್ಪಲಿನ ಮೇಲೆ ಅಧಿಕವಾಗಿ ಆಗುತ್ತಿದೆ.

ಗೋಣಿಕೊಪ್ಪಲು - ಕಾನೂರು - ಕುಟ್ಟ, ಗೋಣಿಕೊಪ್ಪಲು - ಶ್ರೀಮಂಗಲ - ಕುಟ್ಟ ಹಾಗೂ ಬಿರುನಾಣಿ ಪ್ರಯಾಣಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಇದೀಗ ತೊಂದರೆಗೊಳಗಾಗಿದ್ದಾರೆ. ಇತ್ತ ಪಾಲಿಬೆಟ್ಟ, ಬಿ.ಶೆಟ್ಟಿಗೇರಿ ಮಾರ್ಗದಲ್ಲಿಯೂ ಬಸ್ ಓಡಾಟ ಆರಂಭಗೊಂಡಿಲ್ಲ. ಪ್ರಮುಖವಾಗಿ ಈ ಭಾಗದ ಸರ್ಕಾರಿ ನೌಕರರು, ಖಾಸಗಿ ಶಾಲಾ ಶಿಕ್ಷಕರು, ಕಾರ್ಮಿಕವರ್ಗ ತೀವ್ರವಾಗಿ ತೊಂದರೆಗೊಳಗಾಗಿವೆ. ಈ ಭಾಗದಿಂದ ಗೋಣಿಕೊಪ್ಪಲಿನೆಡೆಗೆ ಬರಬೇಕಿದ್ದಲ್ಲಿ ಆಟೋ ಅಥವಾ ಖಾಸಗಿ ವಾಹನಗಳಿಗೆ ದೊಡ್ಡ ಮೊತ್ತದ ಬಾಡಿಗೆಯನ್ನೇ ನೀಡಬೇಕಾಗಿದೆ. ಕನಿಷ್ಟ ಕುಟ್ಟದಿಂದ ಕಾನೂರು ಅಥವಾ ಶ್ರೀಮಂಗಲ ಮಾರ್ಗ ಬೆಳಿಗ್ಗೆ ಮತ್ತು ಸಂಜೆ ಸರ್ಕಾರಿ ಬಸ್ ವ್ಯವಸ್ಥೆಯನ್ನಾದರೂ ಕಲ್ಪಿಸುವಂತೆ ಈ ಭಾಗದ ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವೀರಾಜಪೇಟೆ, ಪೆÇನ್ನಂಪೇಟೆ ಕಂದಾಯ ಇಲಾಖೆ, ನ್ಯಾಯಾಲಯದಲ್ಲಿ ಇತರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಇರುವ ನಾಗರಿಕರಿಗೂ ಇದೀಗ ಬಸ್ ವ್ಯವಸ್ಥೆ ಇಲ್ಲದೆ ಬವಣೆ ಏರ್ಪಟ್ಟಿದೆ. ಪರಿಣಾಮ ವಾಣಿಜ್ಯ ನಗರಿ ಗೋಣಿಕೊಪ್ಪಲಿನಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ನೆಲಕಚ್ಚಿವೆ.