ಎರಡು ದಿನ ಜ್ವರ ಬಂದಾಗ ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಪರೀಕ್ಷೆಗೊಳಗಾದೆ. ಪಾಸಿಟಿವ್ ಎಂದು ತಿಳಿದು ಬಂದಾಗ ಒಮ್ಮೆಗೇ ಕಾಲಡಿಯ ಭೂಮಿ ಬಿರುಕು ಬಿಟ್ಟಂತಾಗಿ ದಿಗ್ಭ್ರಾಂತನಾದೆ ಎಂದು ವೀರಾಜಪೇಟೆ ಶಾಂತಿನಗರದ 40 ರ ಹರೆಯದ ಝಿಯಾವುಲ್ ಹುಸೈನ್ ತಮ್ಮ ಅನುಭವ ಹೇಳಿಕೊಂಡರು.

ತನಗೆ ಪ್ರತಿವರ್ಷ ಮಳೆಗಾಲದಲ್ಲಿ ಜ್ವರ, ಕೆಮ್ಮು, ನೆಗಡಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿತ್ತು. ಅಂತೆಯೇ ಅದು ಮನೆ ಮಂದಿಯನ್ನು ಕಾಡುತ್ತಿತ್ತು. ನಮ್ಮ ಕುಟುಂಬದ ವೈದ್ಯರನ್ನು ಭೇಟಿಯಾಗಿ ಔಷಧಿ ತೆಗೆದುಕೊಂಡಾಗ ಮೂರ್ನಾಲ್ಕು ದಿನಗಳಲ್ಲೇ ವಾಸಿಯೂ ಆಗುತ್ತಿತ್ತು ಎಂದ ಝಿಯಾವುಲ್ ಹುಸೈನ್, ಈ ಬಾರಿಯೂ ಮಾಮೂಲಿ ಜ್ವರ ಕಾಣಿಸಿಕೊಂಡಿದ್ದರೂ ಅದು ಕೊರೊನಾ ಪಿಡುಗಿನ ಸಂದರ್ಭದಲ್ಲಿ ಬಂದುದರಿಂದ ಆಸ್ಪತ್ರೆ ಸೇರಬೇಕಾಗಿ ಬಂತು ಎಂದು ‘ಶಕ್ತಿ’ಯೊಂದಿಗೆ ಹೇಳಿದರು.

ಕೋವಿಡ್ ಆಸ್ಪತ್ರೆಯಲ್ಲಿ 5 ದಿನಗಳ ಚಿಕಿತ್ಸೆಯ ಬಳಿಕ ತಾನು ಆರು ದಿನಗಳ ಕಾಲ ನವೋದಯ ಶಾಲೆಯಲ್ಲಿ ವಿಶ್ರಾಂತಿಯಲ್ಲಿ ಕಳೆಯಬೇಕಾಗಿ ಬಂತು. ಕೊರೊನಾ ಪಾಸಿಟಿವ್ ಎಂಬ ಶಬ್ದ ಕೇಳಿದಾಗ ಆದ ದಿಗ್ಭ್ರಾಂತಿ ದಿನ ಕಳೆದಂತೆ ಕಡಿಮೆಯಾಗಿ ಆಸ್ಪತ್ರೆಯ ಚಿಕಿತ್ಸೆ, ಸಿಬ್ಬಂದಿಗಳ ಉತ್ತಮ ಆರೈಕೆಯಿಂದಾಗಿ ಮೂರೇ ದಿನಗಳಲ್ಲಿ ತಾನು ಸಹಜ ಸ್ಥಿತಿಗೆ ಬಂದೆ ಎಂದು ಹುಸೈನ್ ಹೇಳಿದರು.

ಪಾಸಿಟಿವ್ ಬಂದವರು ಒಮ್ಮೆಗೆ ಹೆದರುವುದು ಸಹಜವಾದರೂ ನನ್ನ ಅನುಭವದಿಂದ ನಾನು ಹೇಳುವುದಿಷ್ಟೆ. ನಾವು ಅನಗತ್ಯ ‘ಟೆನ್ಷನ್’ ಮಾಡಿಕೊಳ್ಳಲೇಬಾರದು. ಆರೋಗ್ಯವಾಗಿದ್ದವರಿಗೆ ಕೊರೊನಾ ಪಾಸಿಟಿವ್ ಬಂದರೆ ಖಂಡಿತಾ ಗುಣವಾಗುತ್ತದೆ. ಆಸ್ಪತ್ರೆಯಲ್ಲೂ ಬಹಳ ಚೆನ್ನಾಗಿ ನೋಡಿಕೊಳ್ತಾರೆ. ಅವರಿವರ ಮಾತುಗಳನ್ನು ಕೇಳಬೇಡಿ ಧೈರ್ಯವಾಗಿರಿ ಎಂದು ಹುಸೈನ್ ಸ್ಥೈರ್ಯದ ಮಾತುಗಳನ್ನಾಡಿದ್ದಾರೆ.

ಕೊರೊನಾ ಪಾಸಿಟಿವ್ ಎಂದು ಜನರಿಗೆ ತಿಳಿದಾಗ ಬೆರಳೆಣಿಕೆಯ ಮಂದಿ ಸಂದೇಹದಿಂದ ನೋಡಿದರೂ, ಪರಿಸರದ ಹೆಚ್ಚಿನವರು ಅನುಕಂಪದಿಂದ ನಡೆದುಕೊಂಡರು ಎಂದು ಹುಸೈನ್ ಹೇಳಿದರು.