ಮಡಿಕೇರಿ, ಆ. 27: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಕಲ್ಲಳ್ಳ ಮೀಸಲು ಅರಣ್ಯದ ಮಾಲೂರು ವಿಭಾಗದಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಈ ಕೃತ್ಯ ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಇಲಾಖೆ ಬಿರುಸಿನ ಕಾರ್ಯಾಚರಣೆ ನಡೆಸುವ ಮೂಲಕ ಹುಲಿ ಹತ್ಯೆ, ಜಿಂಕೆ ಹತ್ಯೆಯಂತಹ ವಿಚಾರಗಳನ್ನು ಪತ್ತೆ ಹಚ್ಚಿದ್ದು, ಹತ್ಯೆಯಾದ ಪ್ರಾಣಿಗಳ ದೇಹದ ಭಾಗವನ್ನು ಪತ್ತೆ ಹಚ್ಚಿದೆ. ಈ ಕುರಿತ ಕಾರ್ಯಾಚರಣೆ ಮತ್ತಷ್ಟು ಬಿರುಸಿನಿಂದ ಸಾಗಿದ್ದು, ಇದೀಗ ಓರ್ವ ಆರೋಪಿಯನ್ನು ಬಂಧಿಸಲಾಗಿ ದ್ದರೆ, ಮೂವರು ತಲೆಮರೆಸಿಕೊಂಡಿ ದ್ದಾರೆ. ಮಲೆಯಾಳಿ ಸಂತೋಷ್ ಎಂಬಾತ ವಶವಾಗಿದ್ದು, ಸಂಶಯ ಇರುವ ರಂಜಿ, ಶಶಿ ಹಾಗೂ ಸುಗುಣ ಎಂಬವರು ಪರಾರಿಯಾಗಿದ್ದಾರೆ.

ವಿವರ-ಮಾಹಿತಿ: ನಿಟ್ಟೂರು - ಬಾಳೆಲೆಯ ಗಡಿಭಾಗದಲ್ಲಿ ಸುಮಾರು 1.5 ಕಿ.ಮೀ. ನಷ್ಟು ದೂರದಲ್ಲಿ ರಕ್ಷಿತಾರಣ್ಯದೊಳಗೆ ಕೆರೆಯೊಂದರ ಬಳಿ ಒಂದೆರಡು ದಿನಗಳ ಹಿಂದೆ ಹುಲಿಯನ್ನು ಹತ್ಯೆ ಮಾಡಿದ್ದು, ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ಗೋಚರಿಸಿದೆ. ಈ ಬಗ್ಗೆ ಸಿಬ್ಬಂದಿಗಳು ಮೇಲ್ಮಟ್ಟಕ್ಕೆ ವರದಿ ನೀಡಿದ್ದಾರೆ. ಇದರಂತೆ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲಿಸಿದ್ದು, ಅಂದಾಜು ಏಳೆಂಟು ವರ್ಷ ಪ್ರಾಯದ ಗಂಡು ಹುಲಿಯ ದೇಹ ಇದಾಗಿತ್ತು. ಗುಂಡೇಟಿನಿಂದ ಇದು ಸಾವಿಗೀಡಾಗಿದ್ದು, ಇದರ ಎರಡು ಕೈಗಳನ್ನು ಹಾಗೂ ಕಾಲನ್ನು (ಪಂಜಾ) ಕತ್ತರಿಸಿ ಕೊಂಡೊಯ್ಯ ಲಾಗಿತ್ತು.

(ಮೊದಲ ಪುಟದಿಂದ) ಅಲ್ಲದೆ ಹಲ್ಲನ್ನೂ ಅಪಹರಿಸಲಾಗಿತ್ತೆನ್ನಲಾಗಿದೆ.

ಪತ್ತೆ ಮಾಡಿದ ಶ್ವಾನ ‘ರಾಣಾ’

ಆರೋಪಿಗಳ ಪತ್ತೆಗೆ ಇಲಾಖೆ ಬಂಡೀಪುರದಿಂದ ಪರಿಣತಿ ಹೊಂದಿರುವ ಶ್ವಾನ ‘ರಾಣಾ’ ಸಹಿತವಾಗಿ ಯತ್ನಿಸಿತ್ತು. ಈ ಸಂದರ್ಭ ರಾಣಾ ಸ್ಥಳದಿಂದ ನೇರವಾಗಿ ನುಗ್ಗಿದ್ದು, ಕಾರ್ಮಾಡು ಗೇಟ್ ಸನಿಹದ ಮಲೆಯಾಳಿ ಸಂತೋಷ್ ಎಂಬಾತನ ಮನೆಗೆ. ಮನೆಯನ್ನು ಶೋಧಿಸಿದ ಸಂದರ್ಭ ಅಲ್ಲಿ ಹುಲಿಯ ದೇಹದ ಕುರುಹು ಸಹಿತವಾಗಿ ಜಿಂಕೆ ಮಾಂಸ ಹಾಗೂ ಜಿಂಕೆಯ ಕಾಲುಗಳು ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

ಬಳಿಕ ರಾಣಾ ಸುಳುಗೋಡು, ನಿಟ್ಟೂರು ವ್ಯಾಪ್ತಿಯ ಹೊಟ್ಟೇಂಗಡ ರಂಜು, ಕಾಂಡೆರ ಶಶಿ, ಕಾಂಡೆರ ಶರಣು ಎಂಬವರ ಮನೆ ಬಳಿಯೂ ಸುಳಿದಾಡಿದೆ. ಸಂತೋಷ್‍ನ ವಿಚಾರಣೆ ಸಂದರ್ಭ ಈ ಮೂವರೂ ಇದರಲ್ಲಿ ಭಾಗಿಯಾಗಿರುವ ಮಾಹಿತಿ ತಂಡಕ್ಕೆ ಲಭ್ಯವಾಗಿದ್ದು, ಇವರ ಮನೆಗಳ ವ್ಯಾಪ್ತಿಯಲ್ಲೂ ಶೋಧ ನಡೆಸಲಾಗಿದೆ. ಈ ವೇಳೆ ಮನೆ ಸಹಿತ ನೆಲದಲ್ಲಿ ಹೂತಿಟ್ಟಿದ್ದ ಪ್ರಾಣಿಗಳ ದೇಹದ ಭಾಗ, ಪಂಜಾ, ಉಗುರು, ಮತ್ತಿತರ ಆಯುಧಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಮೂವರು ಆರೋಪಿಗಳು ಇದೀಗ ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆಯೊಂದಿಗೆ ಪೊಲೀಸರಿಂದಲೂ ಕಾರ್ಯಾಚರಣೆ ನಡೆಯುತ್ತಿರುವದಾಗಿ ತಿಳಿದು ಬಂದಿದೆ.

ಈ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ಕೃತ್ಯವೊಂದು ನಡೆದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಪ್ರೊಜೆಕ್ಟ್ ಟೈಗರ್‍ನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ನಾಗರಹೊಳೆಯ ನಿರ್ದೇಶಕ ಮಹೇಶ್‍ಕುಮಾರ್, ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಎಸಿಎಫ್ ಪೌಲ್ ಆಂಟನಿ, ವಲಯ ಅರಣ್ಯಾಧಿಕಾರಿಗಳಾದ ಗಿರೀಶ್, ಅಮಿತಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.