ಮಡಿಕೇರಿ, ಆ. 27: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ನಗರದ ಐಟಿಐ ಹಿಂಭಾಗವಿರುವ ಪ್ರಾಚ್ಯವಸ್ತು ಇಲಾಖೆಗೆ ಒಳಪಡುವ ಸ್ಮಾರಕ ಪ್ರದೇಶದಲ್ಲಿ ಸಂಸ್ಕಾರ ಮಾಡಲು ಮುಂದಾದ ಸಂದರ್ಭ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ ಘಟನೆ ಇಂದು ಸಂಜೆ ವೇಳೆ ಸಂಭವಿಸಿದೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕ್ರಿಶ್ಚಿಯನ್ ಸಮುದಾಯದವರು ಐಟಿಐ ಹಿಂಭಾಗ ಇರುವ ಸ್ಮಾರಕದ ಪ್ರದೇಶದಲ್ಲಿ ಸಂಸ್ಕಾರ ನಡೆಸಲು ಮುಂದಾಗಿದ್ದರು. ಜೆಸಿಬಿ ವಾಹನದೊಂದಿಗೆ ಆಗಮಿಸಿ ಗುಂಡಿ ತೋಡುತ್ತಿದ್ದ ಸಂದರ್ಭ ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯು, ಚರ್ಚ್‍ನ ಧರ್ಮಗುರುಗಳ ಸಹಿತ ಸ್ಥಳದಲ್ಲಿದ್ದವರೊಂದಿಗೆ ಮಾತುಕತೆ ನಡೆಸುತ್ತ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.ಈ ಪ್ರದೇಶದಲ್ಲಿ ಇದುವರೆಗೆ ಯಾವುದೇ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಿಲ್ಲ; ಇದು ಹಳೆಯ ಸ್ಮಾರಕ ಪ್ರದೇಶವೆಂದು ಮನವರಿಕೆ ಮಾಡಿದರು. ಹೊಸ ಬಡಾವಣೆ ಬಳಿ ಕ್ರಿಶ್ಚಿಯನ್ ಸ್ಮಶಾನವಿದ್ದು, ಈ ಹಿಂದೆ ಎರಡು ದೇಹಗಳ

(ಮೊದಲ ಪುಟದಿಂದ) ಕ್ರಿಯೆ ನಡೆಸಲಾಗಿದೆ. ಅಲ್ಲಿಯೇ ಮಾಡುವಂತೆ ಹೇಳಿದರು. ಆದರೂ ಪರಿಸ್ಥಿತಿ ತಿಳಿಯಾಗದ್ದರಿಂದ ಈ ವಿಚಾರವನ್ನು ತಹಶೀಲ್ದಾರರ ಗಮನಕ್ಕೆ ತರಲಾಗಿದೆ. ತಹಶೀಲ್ದಾರರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಅಂತಿಮ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಉಭಯ ಕಡೆಯವರನ್ನು ಸಮಾಧಾನಪಡಿಸಿದರು. ಕ್ರೈಸ್ತ ಮುಖಂಡರ ಬಳಿ ಮಾತನಾಡಿ, ಈ ಹಿಂದೆ ಶವ ಸಂಸ್ಕಾರ ಮಾಡಿದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದಲ್ಲಿಯೇ ಕ್ರಿಯೆ ನಡೆಸುವಂತೆ ತಿಳಿಹೇಳಿ, ಅವರುಗಳನ್ನು ಅಲ್ಲಿಗೆ ಕಳುಹಿಸಲಾಯಿತು. ನಂತರ ಕ್ರಿಶ್ಚಿಯನ್ ಸ್ಮಶಾನದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿತು. ಘಟನೆಯ ಸ್ಥಳದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಸ್ಥಳೀಯರಾದ ಮೂಡೇರ ರಾಯ್, ಆನಂದ್, ಪುದಿಯೊಕ್ಕಡ ಕಾಶಿ, ಕುಮಾರ್, ಪಾಂಡ್ಯನ್, ನಿವೃತ್ತ ಪೊಲೀಸ್ ಅಧಿಕಾರಿ ಅಚ್ಯುತ, ಹರೀಶ್ ಸರಳಾಯ, ಜಗದೀಶ್ ಇನ್ನಿತರರು ಜಮಾಯಿಸಿದ್ದರು.