ಮುಳ್ಳೂರು, ಆ. 27: ಶನಿವಾರಸಂತೆ ಸಹಾಯಕ ಠಾಣಾಧಿಕಾರಿ ಗೋವಿಂದ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ತಾ. 29 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶನಿವಾರಸಂತೆ ಎಎಸ್‍ಐ ಗೋವಿಂದ್ ಜನರೊಂದಿಗೆ ಅನುಚಿತವಾಗಿ ವರ್ತಿಸುವುದು ಹಾಗೂ ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ ಲಂಚದ ಆಮಿಷವೊಡ್ಡಿದ್ದ ಕುರಿತಾಗಿ ದಸಂಸ ಜಿಲ್ಲಾ ಸಮಿತಿಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತನಿಖೆ ನಡೆಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಮನವಿ ನೀಡಲಾಗಿದೆ.

ಆದರೆ ಹಿರಿಯ ಅಧಿಕಾರಿಗಳು ಎಎಸ್‍ಐ ವಿರುದ್ಧ ಯಾವುದೆ ಕ್ರಮಕೈಗೊಳದಿರುವ ಹಿನ್ನೆಲೆಯಲ್ಲಿ ತಾ. 29 ರಂದು ಎಎಸ್‍ಐ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಶನಿವಾರಸಂತೆ ಪ್ರವಾಸಿ ಮಂದಿರದಿಂದ ಕೆಆರ್‍ಸಿ ವೃತ್ತದ ಮೂಲಕ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

-ಭಾಸ್ಕರ್ ಮುಳ್ಳೂರು