ಶನಿವಾರಸಂತೆ, ಆ. 27: ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸ ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯವಿದ್ದರೂ, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಕೊಳವೆ ಬಾವಿ ದುರಸ್ತಿಪಡಿಸದ ಆಲೂರು ಗ್ರಾಮ ಪಂಚಾಯಿತಿಗೆ ಕೊರೊನಾ ತಟ್ಟಿದಂತಿದೆ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮೆಣಸ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಕೊಳವೆ ಬಾವಿ ಕೆಟ್ಟುಹೋಗಿದೆ. ಗ್ರಾಮಸ್ಥರು ಅನೇಕ ಬಾರಿ ಆಲೂರು ಗ್ರಾಮ ಪಂಚಾಯಿತಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ಗ್ರಾಮದ ಮಹಿಳೆಯರು ಅನೇಕ ಬಾರಿ ಖುದ್ದಾಗಿ ಪಂಚಾಯಿತಿಗೆ ಭೇಟಿ ನೀಡಿ ವಿಚಾರ ತಿಳಿಸಿದರು. ಅಭಿವೃದ್ಧಿ ಅಧಿಕಾರಿಯವರು ನಿರ್ಲಕ್ಷ್ಯ ಭಾವನೆ ಹೊಂದಿರುತ್ತಾರೆ. ಮೇಲಿನ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಿ, ಅಭಿವೃದ್ಧಿ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥ ಮಹಿಳೆಯರಾದ ಸುನಂದ, ಜಯಮ್ಮ, ಗುರುಮಲ್ಲಪ್ಪ, ದಾಕ್ಷಾಯಣಿ, ರೀತಾ, ಗುರು ಲಿಂಗಪ್ಪ, ವಿದ್ಯಾಮೂರ್ತಿ, ಪದ್ಮಾಕುಮಾರಿ, ಸೀತಮ್ಮ, ಪ್ರಿಯಾಂಕ, ಚೇತನ್, ದೀಪಕ್, ಪ್ರಸನ್ನ ಹಾಗೂ ಇತರರು ಲಿಖಿತ ಹೇಳಿಕೆ ನೀಡಿದ್ದಾರೆ.