ಚೆಟ್ಟಳ್ಳಿ, ಆ. 27: ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನಾದ್ಯಂತ ಹಲವು ಕಷ್ಟ - ನಷ್ಟಗಳು ಸಂಭವಿಸಿದೆ. ಅದೇ ರೀತಿ ಮಹಾಮಳೆಯ ಪರಿಣಾಮ ಚೆಟ್ಟಳ್ಳಿ-ಕತ್ತಲೆಕಾಡುವಿನ ಮುಖ್ಯರಸ್ತೆಯ ಮೇಲಿನ ಭಾರೀ ದೊಡ್ಡಮಟ್ಟದ ಬರೆ ಜರಿದದ್ದು ಒಂದೆಡೆಯಾದರೆ ಕೆಲವೆಡೆ ಇಳಿಜಾರಿನ ಬರೆಗಳು ಮರಗಳ ಸಮೇತ ಜಾರಿ ಹೋಗಿವೆ. ಸಮೀಪದ ತೋಟದ ಮಾಲೀಕರಿಗೆ ಭಾರೀ ನಷ್ಟ ಉಂಟಾಗಿದೆ. ಮರಗಿಡಗಳು ಸೇರಿ ಬರೆಯ ಮಣ್ಣು ಜಾರಿದ ರಭಸಕ್ಕೆ ರಸ್ತೆಗಳು ಮುಚ್ಚಿಹೋದ ಕಾರಣ ಲೋಕೋಪಯೋಗಿ ಇಲಾಖೆ ಇಟಾಚಿ ಯಂತ್ರದ ಮೂಲಕ ಮಣ್ಣನ್ನು ತೆಗೆದು ಮತ್ತೊಂದು ಬದಿಗೆ ರಾಶಿ ಹಾಕಿದ್ದಾರೆ. ಮುಂದೆ ಮಣ್ಣು ಕುಸಿಯದಿರಲೆಂದು ಎಮ್‍ಸ್ಯಾಂಡನ್ನು ಚೀಲದಲ್ಲಿ ತುಂಬಿ ತಾತ್ಕಾಲಿಕವಾಗಿ ಜೋಡಿಸಿಡಲಾಗಿದೆ.

ಅಭ್ಯಾಲದಿಂದ ಚೆಟ್ಟಳ್ಳಿಯವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದರಿಂದ ಜುಲೈ 9 ರಿಂದ ಆಗಸ್ಟ್ 25 ರವರೆಗೆ ಚೆಟ್ಟಳ್ಳಿಯಿಂದ ಮಡಿಕೇರಿಗೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿದರು. ಕೊರೊನಾ ಲಾಕ್‍ಡೌನ್ ಹಾಗೂ ಮಳೆಯ ನಡುವೆ ಕಾಮಗಾರಿ ತಡವಾದರೂ ಅವದಿಯ ಒಳಗೆ ಮುಗಿದಿದೆ. ಚೆಟ್ಟಳ್ಳಿ ಮೂಲಕ ಮಡಿಕೇರಿ ರಸ್ತೆಯಲ್ಲಿ ಲಘುವಾಹನಗಳು ಓಡಾಡತೊಡಗಿವೆ.

ಒಂದು ಬದಿ ಖಾಸಗಿ ಮೊಬೈಲ್ ಕಂಪನಿಯೊಂದು ಕೇಬಲ್ ಅಳವಡಿ ಸಲು ತೆಗೆದ ಚರಂಡಿ ಹಾಗೂ ಮಳೆಗಾಲ ಪ್ರಾರಂಭದ ಮೊದಲು ಲೋಕೋಪಯೋಗಿ ಇಲಾಖೆ ಕೆಲವೆಡೆ ಇರುವ ಚರಂಡಿ ಶುಚಿಗೊಳಿಸದಿರುವುದು, ರಸ್ತೆಬದಿಯ ಕಾಡುಕಡಿಯದಿರುವುದು, ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸದಿರುವುದು, ಮಣ್ಣುಮುಚ್ಚಿ ಹೋದ ಮೋರಿಗಳನ್ನು ತೆರೆಯದಿರುವುದರ ಪರಿಣಾಮ ಚೆಟ್ಟಳ್ಳಿ-ಕತ್ತಲೆಕಾಡು ರಸ್ತೆ ಅಪಾಯಕ್ಕೆ ತಲುಪಲು ಕಾರಣವೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಿತ್ಯವೂ ಲಘುವಾಹನ ಈ ರಸ್ತೆಯಲ್ಲಿ ತೆವಳುತ್ತಾ ಹೋಗುತ್ತಿರುವ ಪರಿಸ್ಥಿತಿ ಉಂಟಾಗಿದೆ. ಮುಂದೆ ಭಾರೀ ವಾಹನಗಳು ತೆರಳಿದರೆ ಬಿರುಕುಬಿಟ್ಟ ರಸ್ತೆಗಳು ಸಡಿಲಗೊಂಡು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ನೂತನವಾಗಿ ಮಾಡಲಾದ ಕಾಂಕ್ರಿಟ್ ಕಾಮಗಾರಿ ಒಂದು ಬದಿ ಚರಂಡಿ, ಮತ್ತೊಂದು ಬದಿ ಮಣ್ಣು ಹಾಕಿ ಮುಚ್ಚಬೇಕಿದೆ. ವಾಹನ ಸವಾರರು ಮತ್ತೊಂದು ವಾಹನಕ್ಕೆ ದಾರಿಬಿಡುವ ರಭಸದಲ್ಲಿ ಬದಿಗೆ ಜಾರಿಕೊಳ್ಳುವ ಸಾಧ್ಯವಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮೈಯೆಲ್ಲ ಕಣ್ಣಾಗಿ ಎಚ್ಚರದಿಂದಿರುವದು ಒಳಿತು.

-ಪುತ್ತರಿರ ಕರುಣ್‍ಕಾಳಯ್ಯ