ಮಡಿಕೇರಿ, ಆ. 26: ಮಧ್ಯ ಪ್ರದೇಶದ ಭೂಪಾಲ್‍ನಿಂದ ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯದ ಕೊಲ್ಲಂಗೆ ಅಕ್ರಮವಾಗಿ ವಾಹನ ವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದೆ. ಗಡಿಭಾಗವಾದ ಕುಟ್ಟ ಚೆಕ್‍ಪೋಸ್ಟ್ ನಲ್ಲಿ ಕುಟ್ಟ ಪೊಲೀಸರು ಇದನ್ನು ಪತ್ತೆಹಚ್ಚಿದ್ದು, ಈಚರ್ ವಾಹನ ಸಹಿತವಾಗಿ 24 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈಚರ್ ಲಾರಿ (ಎಂ.ಪಿ.-04, ಜಿ.ಬಿ.-4945)ಯಲ್ಲಿ ಎಮ್ಮೆ ಹಾಗೂ ಕೋಣಗಳು ಸೇರಿ ಒಟ್ಟು 24 ಜಾನುವಾರುಗಳನ್ನು ತುಂಬಲಾಗಿತ್ತು. ಈ ವಾಹನ ಕುಟ್ಟ ಮಾರ್ಗವಾಗಿ ಕೇರಳದತ್ತ ತೆರಳುತ್ತಿದ್ದ ಸಂದರ್ಭ ಬೆಳಗ್ಗಿನ ಜಾವ ವಶಕ್ಕೆ ಪಡೆಯಲಾಗಿದೆ. ಅಲ್ಲಿಂದ ಇಲ್ಲಿಯತನಕ ಸುಲಲಿತವಾಗಿ ಯಾವ ರೀತಿ ವಾಹನ ತಲುಪಿತ್ತು ಎಂಬುದು ಅಚ್ಚರಿಯಾಗಿದೆ. (ಮೊದಲ ಪುಟದಿಂದ) ವಾಹನದಲ್ಲಿದ್ದ ನಿಜಾಮ್, ಮಹಮದ್ ರಫೀಕ್, ಫೈಜಾನ್ ಹಾಗೂ ಶಾನ್ ಎಂಬವರುಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಾಲ್ವರ ಪೈಕಿ ಮೂವರು ಭೂಪಾಲ್‍ನವರಾಗಿದ್ದು, ಓರ್ವ ಆರೋಪಿ ಕೇರಳದವನಾಗಿದ್ದಾನೆ. ಕುಟ್ಟ ಎಸ್.ಐ. ಚಂದ್ರಪ್ಪ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಜಾನುವಾರುಗಳನ್ನು ಮೈಸೂರಿನ ಪಿಂಜರ್ ಪೋಲ್‍ಗೆ ಸಾಗಿಸಲಾಗಿದೆ.