ಸೋಮವಾರಪೇಟೆ, ಆ. 25: ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕ್ರಮವಹಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2018ರಿಂದಲೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಷ್ಟು ಭೂಕುಸಿತ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಕಾಫಿ ಫಸಲು ಹಾನಿಯೊಂದಿಗೆ, ಕಾಫಿ ತೋಟಗಳು ರೋಗಪೀಡಿತವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಲು ಮುಂದಾಗಬೇಕು ಎಂದರು. ಭಾರೀ ಮಳೆಯಿಂದಾಗಿ ಅರೇಬಿಕಾ, ರೋಬಾಸ್ಟಾ, ಕಾಳುಮೆಣಸು ಫಸಲು ನಷ್ಟವಾಗಿದೆ. ಅತಿಯಾದ ಮಳೆಗೆ ಫಸಲು ಕೊಳೆ ರೋಗಕ್ಕೆ ತುತ್ತಾಗಿ ಕಾಫಿ ನಿರಂತರವಾಗಿ ಉದುರುತ್ತಿದೆ. ಬಿಳಿಕಾಂಡಕೊರಕ ಹಾವಳಿ ಹೆಚ್ಚಾಗಿ ಎಕರೆಗೆ 200ರಿಂದ 250 ಗಿಡಗಳನ್ನು ಕಿತ್ತು ನಾಶಪಡಿಸಬೇಕಾಗಿದೆ. ಹವಮಾನ ವೈಪರೀತ್ಯದಿಂದ ಹೊಸ ತೋಟಗಳು ರೋಗಪೀಡಿತವಾಗುತ್ತಿದ್ದು, ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಅಭಿಪ್ರಾಯಿಸಿದರು.

ಸಂಘದ ಉಪಾಧ್ಯಕ್ಷರುಗಳಾದ ಬಿ.ಎಂ. ಲವ, ಕೆ.ಪಿ. ಬಸಪ್ಪ, ಕಾರ್ಯದರ್ಶಿ ಎಸ್.ಪಿ. ಪ್ರಕಾಶ್, ಪದಾಧಿಕಾರಿಗಳಾದ ಬಿ.ಜಿ. ಪೂವಮ್ಮ, ಎನ್.ಎನ್. ರಮೇಶ್ ಅವರುಗಳು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.