*ಸಿದ್ದಾಪುರ, ಆ. 25 : ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಚೆಟ್ಟಳ್ಳಿ ಪ್ರೌಢಶಾಲೆ ಸ್ಥಳೀಯ ನರೇಂದ್ರಮೋದಿ ಭವನದಲ್ಲಿ ತರಗತಿಗಳನ್ನು ಆರಂಭಿಸಲಾಗಿದೆ.

ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 8 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಹಾಗೂ ಕೋವಿಡ್ ಮುಂಜಾಗೃತಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದ ಸೋಮವಾರಪೇಟೆ ತಾ.ಪಂ ಸದಸ್ಯ ಹಾಗೂ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ಶಿಕ್ಷಕರು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದು, ಇದಕ್ಕೆ ಪ್ರತಿಫಲವಾಗಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.

ಶ್ರಮ ವಹಿಸಿ ವಿದ್ಯಾರ್ಜನೆ ಮಾಡಿ ಗ್ರಾಮ ಹಾಗೂ ದೇಶಕ್ಕೆ ಕೀರ್ತಿ ತರುವ ಕಾರ್ಯ ಮಾಡಬೇಕು, ಸೇವೆಯನ್ನು ವಿದೇಶಗಳಿಗೆ ಮೀಸಲಿಡದೆ ವಿದ್ಯೆ ಕಲಿತ ದೇಶದಲ್ಲೇ ಸೇವೆ ಸಲ್ಲಿಸಬೇಕು. ಗುರು, ಹಿರಿಯರಿಗೆ ಗೌರವ ನೀಡುವುದನ್ನು ಮೊದಲು ಕಲಿಯಬೇಕೆಂದು ಮಣಿಉತ್ತಪ್ಪ ಕಿವಿಮಾತು ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ, ಸಹಕಾರ ಸಂಘದ ಸಿಬ್ಬಂದಿಗಳಾದ ಬಟ್ಟೀರ ನಾಣಯ್ಯ, ಕಣಜಾಲು ಕಿಶೋರ್, ಶಿಕ್ಷಕಿ ಸುನಂದ ಮತ್ತಿತರರು ಹಾಜರಿದ್ದರು.

ತರಗತಿ ಆರಂಭಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಮಣಿಉತ್ತಪ್ಪ ಅವರು ಉಚಿತ ಮಾಸ್ಕ್ ಗಳನ್ನು ವಿತರಿಸಿದರು. ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್‍ಗೂ ಒಳಪಡಿಸಿ ಸ್ಯಾನಿಟೈಸ್ ನೀಡಲಾಯಿತು.