‘ಹೆಂಡತಿಗೆ ಜ್ವರ ಬಂದು ಆಸ್ಪತ್ರೆಗೆ ಹೋಗಬೇಕಾಗಿ ಬಂತು. ಗಂಟಲ ದ್ರವ ಪರೀಕ್ಷಿಸಿ ಪಾಸಿಟಿವ್ ಎಂದರು. ವಿಷಯ ತಿಳಿದು ಬಂಧು-ಬಳಗದವರು ದೂರವಾದರು.’ ಹೀಗೆಂದವರು ಶನಿವಾರಸಂತೆಯ 56ರ ಹರೆಯದ ಫಕ್ರುದ್ದೀನ್ ಅವರು. ಇವರ ಮಡದಿ 46ರ ಹರೆಯದ ಝುಬೈದ ಅವರಿಗೆ ಕಳೆದ ಜೂನ್ ತಿಂಗಳಿನಲ್ಲಿ ಜ್ವರ ಬಂದಿತ್ತು. ಹಾಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೊತೆಗೆ ಕೊರೊನಾದ ಯಾವುದೇ ಲಕ್ಷಣಗಳಿಲ್ಲದ ನನ್ನನ್ನೂ ನನ್ನ ಪುತ್ರ 18ರ ಹರೆಯದ ಬಾಸಿತ್‍ನನ್ನೂ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಕರೆಸಿಕೊಂಡರು ಎಂದು ಫಕ್ರುದ್ದೀನ್ ಹೇಳಿದರು. ಮಡದಿಯ ಜ್ವರ ಕೆಲವೇ ದಿನಗಳಲ್ಲಿ ವಾಸಿಯಾದರೂ 18 ದಿನಗಳ ಕಾಲ ನಮ್ಮೆಲ್ಲರನ್ನು ಆಸ್ಪತ್ರೆಯಲ್ಲಿ ಇರಿಸಿದರು ಎಂದು ಹೇಳಿದ ಫಕ್ರುದ್ದೀನ್, ತನ್ನ ಮಡದಿಗೆ ಕೊರೊನಾ ಎಂದು ಸುದ್ದಿ ಪ್ರಚಾರವಾದೊಡನೆ ನೆರೆಯವರು, ಬಂಧುಗಳು ದೂರ ಸರಿದರು. ಕಷ್ಟ-ಸುಖವನ್ನು ಕೇಳಿ ತಿಳಿಯಲು ಕೂಡ ಯಾರೊಬ್ಬರೂ ಮುಂದಾಗಲಿಲ್ಲ. 18 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಮನೆಗೆ ಮರಳಿದಾಗ ಬಂಧುಗಳಾರೂ ನಮ್ಮ ಆರೋಗ್ಯ ವಿಚಾರಿಸಲು ಬರಲಿಲ್ಲ. ತಿರುಗಿಯೂ ಕೂಡ ನೋಡಲಿಲ್ಲ ಒಡಹುಟ್ಟಿದವರೇ ದೂರವಾದರು. ನಾವು ಆರೋಗ್ಯವಾಗಿದ್ದೇವೆ ಎಂದು ಗೊತ್ತಾಗಿ ಕೂಡ ಕುಟುಂಬದ ಯಾವುದೇ ಶುಭ ಕಾರ್ಯಗಳಿಗೂ ತಮ್ಮನ್ನು ಬಂಧುಗಳು ಆಹ್ವಾನಿಸದೆ ಒಂದು ರೀತಿಯಲ್ಲಿ ಅಸ್ಪøಶ್ಯರಂತೆ ಕಂಡರು ಎಂದು ಫಕ್ರುದ್ದೀನ್ ಅವರು ನೋವು ತೋಡಿಕೊಂಡರು.

ಕೊರೊನಾ ಎಂದಾಗ ಆರಂಭದಲ್ಲಿ ಒಮ್ಮೆ ಭಯ ಕಾಡಿದರೂ ಒಂದೆರಡು ದಿನಗಳಲ್ಲಿ ಅದು ದೂರಾಯಿತು. ಕೊರೊನಾ ಎಂದಾಗ ಯಾರು ಕೂಡ ಧೈರ್ಯಗೆಡ ಬಾರದು ಎಂದು ಝುಬೈದಾ-ಫಕ್ರುದ್ದೀನ್ ದಂಪತಿಗಳು ಹೇಳುತ್ತಾರೆ.