(ನಿನ್ನೆಯ ಸಂಚಿಕೆಯಿಂದ) ಬಡಾವಣೆಗಳ ನಿರ್ಮಾಣ: ಜನರು ಆರ್ಥಿಕವಾಗಿ ಸಬಲರಾದಂತೆ ನಗರ ಪ್ರದೇಶದ ಐಶಾರಾಮದ ಜೀವನವನ್ನು ಬಯಸುತ್ತಾರೆ. ಇದರಿಂದಾಗಿ ನಗರ ಪ್ರದೇಶದಲ್ಲಿ ನಿವೇಶನಗಳ ಬೇಡಿಕೆ ಹೆಚ್ಚಾಗತೊಡಗಿದೆ. ಹಾಗಾಗಿ ಜನರು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿ ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹೆಚ್ಚಿನ ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಅಧಿಕಾರಿಗಳ ಮತ್ತು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಬಡಾವಣೆಗಳಾಗಿ ನಿರ್ಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬಡಾವಣೆಗಳು ನಾಯಿಕೊಡೆಯಂತೆ ತಲೆಯೆತ್ತುತ್ತಿವೆ. ಅಧಿಕಾರಿಗಳ ಬಾಹ್ಯ ಪ್ರಭಾವದಿಂದಾಗಿ ಕನಿಷ್ಟ ನಿಯಮವನ್ನು ಪಾಲಿಸದೆ, ನಿಯಮಗಳನ್ನು ಗಾಳಿಗೆ ತೂರಿರುವ ನಿದರ್ಶನಗಳನ್ನು ಕಾಣಬಹುದು. ನೂತನ ಬಡಾವಣೆಗಳು ನದಿಯ ದಂಡೆಯ ಮೇಲೆ, ಭತ್ತದ ಗದ್ದೆಗಳಲ್ಲಿ ಸಾಮಾನ್ಯವಾಗಿದೆ. ಬಡಾವಣೆಯಲ್ಲಿನ ಕಾಂಕ್ರೀಟಿಕರಣದಿಂದಾಗಿ ನೀರು ಭೂಮಿಗೆ ಇಂಗಲು ಸಾಧ್ಯವಾಗದೆ ಬಹಳ ಬೇಗನೆ ಜಲಾವೃತವಾಗುತ್ತಿದೆ.
ಆಧುನಿಕ ಯಂತ್ರೋಪಕರಣಗಳ ಬಳಕೆ: ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಲ್ಲ ಎಂಬದನ್ನು ತೋರಿಸಿಕೊಟ್ಟಿದ್ದಾನೆ. ಬೆಟ್ಟದ ತುತ್ತತುದಿಯ ಮೇಲೆ ಆಧುನಿಕ ಯಂತ್ರೋಪಕರಣಗಳಾದ ಹಿಟಾಚಿ, ಜೆಸಿಬಿ, ರೋಡ್ ರೋಲರ್ಸ್‍ಗಳ ಮೂಲಕ ನೆಲವನ್ನು ಸಮಮಾಡಿ ನಿವೇಶನ, ರಸ್ತೆ, ಕಟ್ಟಡ ಮೊದಲಾದವುಗಳನ್ನು ನಿರ್ಮಿಸುತ್ತಿದ್ದಾನೆ. ಇದರಿಂದಾಗಿ ಬೆಟ್ಟದ ತುದಿಯಲ್ಲಿ ನೀರು ಬೆಟ್ಟದೊಳಗೆ ಹೋಗಿ ಮಣ್ಣು ಸಡಿಲವಾಗಿ ಕುಸಿತಕ್ಕೆ ಕಾರಣವಾಗಿದೆ. ಅಲ್ಲದೆ ನದಿಯ ಪಕ್ಕದಲ್ಲಿ ಕಟ್ಟಡ ನಿರ್ಮಿಸಿಕೊಂಡು ನೀರಿನ ಹರಿವಿಗೆ ತಡೆಯೊಡ್ಡಿ ಪ್ರವಾಹಕ್ಕೂ ಕಾರಣವಾಗಿದೆ.
ಅವೈಜ್ಞಾನಿಕ ಕಾಮಗಾರಿಗಳು: ಇಂದು ಅಭಿವೃದ್ಧಿಯ ಹೆಸರಿನಲ್ಲಿ ದುರ್ಗಮ ಪ್ರದೇಶಕ್ಕೂ ವಾಹನಗಳನ್ನು ಸಂಚರಿಸಲು ಅವೈಜ್ಞಾನಿಕ ರಸ್ತೆ ನಿರ್ಮಿಸುತ್ತಿರುವುದನ್ನು ಕಾಣಬಹುದು. ಸುರಕ್ಷಿತವಲ್ಲದ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ಪ್ರಭಾವದಿಂದಾಗಿ ಅವಕಾಶವನ್ನು ನೀಡುತ್ತಿರುವುದನ್ನು ನಾವು ಕಾಣಬಹುದು. ಯೋಗ್ಯವಲ್ಲದ ಸ್ಥಳಗಳಲ್ಲಿ ಬಾಹ್ಯ ಒತ್ತಡಕ್ಕೆ ಒಳಗಾಗಿ ಅವೈಜ್ಞಾನಿಕವಾದ ಕಾಮಗಾರಿ ಕೈಗೊಳ್ಳುವುದರಿಂದ ಭೂಕುಸಿತ ಸಾಮಾನ್ಯವಾಗಿದೆ.
ಸರಕಾರಿ ಭೂಮಿಯ ಅತಿಕ್ರಮಣ: ಬಹಳ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವ ಪ್ರಮುಖ ಅಂಶ, ಎಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿರುವರೋ ಅಲ್ಲಿ ಭೂಕುಸಿತ ಉಂಟಾಗುತ್ತಿರುವುದು. ಮನುಷ್ಯನಿಗೆ ಒಂದು ಅಡಿ ಜಾಗ ನೆಲೆ ನಿಲ್ಲಲು ಸಿಗುವುದಾದರೆ ನಿಧಾನವಾಗಿ ಬೆಟ್ಟ ಮತ್ತು ಮಣ್ಣು ಕೊರೆದು ಮನೆ ಮತ್ತು ಕಟ್ಟಡ ಕಟ್ಟುವ ಹರಸಾಹಸಕ್ಕೆ ಇಳಿಯುತ್ತಾನೆ. ಒಂದು ಅಡಿ ಜಾಗ ನಿಂತುಕೊಳ್ಳಲು ಇದ್ದರೆ ನಂತರ ಅನ್ಯ ಮಾರ್ಗದ ಮೂಲಕ ಆ ಜಾಗದ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಸ್ವಲ್ಪ ಸಮಯದ ನಂತರ ಆ ಸ್ಥಳದಲ್ಲಿ ಬೃಹತ್ ಕಟ್ಟಡಗಳು ತಲೆಯೆತ್ತುತ್ತವೆ. ಇದರಿಂದಾಗಿ ಭೂಮಿಗೆ ಆ ಕಟ್ಟಡದ ಭಾರವನ್ನು ಹೊರುವ ಶಕ್ತಿಯಿಲ್ಲದೆ ಮಳೆಗಾಲದಲ್ಲಿ ನೆಲಕಚ್ಚುವುದನ್ನು ಕಾಣಬಹುದು.
ದರ್ಬೆ ಹುಲ್ಲಿನ ಬುಡಗಳು ನಾಶವಾಗಿರುವುದು: ಎರಡು ಮೂರು ದಶಕಗಳ ಹಿಂದೆ ಬೆಟ್ಟದ ಮೇಲೆ, ಇಳಿಜಾರು ಪ್ರದೇಶಗಳಲ್ಲಿ ದರ್ಬೆ ಹುಲ್ಲು ಸಾಮಾನ್ಯವಾಗಿ ಕಾಣಸಿಗುತ್ತಿತ್ತು. ಈ ಹುಲ್ಲಿಗೆ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ವಿಶೇಷವಾದ ಶಕ್ತಿ ಇತ್ತು. ಆಗ ಜನರು ಬೇಸಿಗೆಯಲ್ಲಿ ಹುಲ್ಲನ್ನು ಕತ್ತರಿಸುತ್ತಿದ್ದರು. ಹೊಸ ಮಳೆ ಪ್ರಾರಂಭವಾದಾಗ ಪುನಃ ಹುಲ್ಲು ಚಿಗುರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೃಷಿ ಕಾರ್ಯಕ್ಕಾಗಿ ಕತ್ತಿಯಿಂದ ಹುಲ್ಲನ್ನು ಕಡಿಯುವ ಬದಲು ಕೆಲವೊಂದು ಕಳೆನಾಶಕವನ್ನು ಸಿಂಪಡಿಸಿ ಹುಲ್ಲನ್ನು ಸಾಯಿಸುತ್ತಿರುವರು. ಇದರಿಂದಾಗಿ ಬೆಟ್ಟಗುಡ್ಡದ ತುದಿಯಲ್ಲಿ, ಇಳಿಜಾರು ಪ್ರದೇಶಗಳಲ್ಲಿ ಹುಲ್ಲು ನಾಶವಾಗಿ ಮಣ್ಣು ಸಡಿಲವಾಗಿ ಬಹಳ ಬೇಗನೆ ಭೂಮಿ ಕುಸಿಯುತ್ತಿದೆ.
ಇಂಗು ಗುಂಡಿ, ಕೆರೆ ಮತ್ತು ಕಂದಕಗಳ ನಿರ್ಮಾಣ: ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕುಸಿತ ಉಂಟಾಗಲು ಅವೈಜ್ಞಾನಿಕ ಇಂಗು ಗುಂಡಿ, ಕೆರೆ ಮತ್ತು ಕಂದಕಗಳ ನಿರ್ಮಾಣ ಪ್ರಮುಖ ಕಾರಣವಾಗಿದೆ. ಭೂಮಿಯ ಅಂತರ್ಜಲದ ಮಟ್ಟ ಹೆಚ್ಚಿಸಲು ಬೆಟ್ಟದ ತುತ್ತತುದಿಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ? ಮಳೆಗಾಲ ಬಂದಾಗ ನೀರು ಭೂಮಿಯ ಒಳಗಡೆ ಹೋಗಿ, ಮಣ್ಣು ಸಡಿಲವಾಗಿ, ನಂತರ ಬೇರೊಂದು ಕಡೆ ನೀರು ಹರಿದು ಅನಾಹುತಗಳನ್ನು ಮಾಡುತ್ತಿದೆ. ಅಲ್ಲದೆ ಮಲೆನಾಡು ಮತ್ತು ಪಶ್ಚಿಮ ಘಟ್ಟದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ ಸಾಮಾನ್ಯವಾಗಿದೆ. ಪ್ರಾಣಿಗಳಿಗೆ ನೀರು ಕುಡಿಯುವ ಉದ್ದೇಶದಿಂದ ಕೆರೆಗಳನ್ನು ಮತ್ತು ಕಾಡು ಮೃಗಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಪ್ಪಿಸಲು ಬೃಹತ್ ಕಂದಕಗಳನ್ನು ನಿರ್ಮಿಸುತ್ತಿದ್ದಾರೆ. ಇದು ಕೂಡ ಮಲೆನಾಡು ಮತ್ತು ಪಶ್ಚಿಮ ಘಟ್ಟದಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ.
(ಮುಂದುವರಿಯುವುದು)
- ಡಾ. ಕೆ.ಸಿ. ದಯಾನಂದ ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ. ಮೊ. 9449766772.