ಮಡಿಕೇರಿ, ಆ. 25: ಕೊಡಗು ಜಿಲ್ಲೆಯ ನೂತನ ಉಪ ವಿಭಾಗಾಧಿಕಾರಿಯಾಗಿ ಈಶ್ವರ ಕುಮಾರ್ ಖಂಡು (ಐಎಎಸ್) ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಒಂದು ವರ್ಷ ಹನ್ನೊಂದು ತಿಂಗಳ ಅವಧಿಗೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಟಿ. ಜವರೇಗೌಡ ಅವರನ್ನು ಸರಕಾರ ವರ್ಗಾವಣೆ ಗೊಳಿಸಿದ್ದು, ಸ್ಥಳ ನಿಯೋಜಿಸಿಲ್ಲ.ನಿರ್ಗಮಿತ ಉಪವಿಭಾಗಾಧಿ ಕಾರಿ ಟಿ. ಜವರೇಗೌಡ ಅವರು ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ತಮ್ಮ ಸೇವೆಯ ಅವಧಿಯಲ್ಲಿ ನಿರ್ವಹಿಸಿದ ಕೆಲಸಗಳು ಕಾವೇರಿ ತಾಯಿ ತವರು ಕೊಡಗಿನಲ್ಲಿ ಸಂಪೂರ್ಣ ತೃಪ್ತಿ ತಂದಿದೆ ಎಂದು ಅಂತರಾಳದ ನುಡಿಯಾಡಿದರು.2018ರ ಪ್ರಾಕೃತಿಕ ದುರಂತದ ಬೆನ್ನಲ್ಲೇ ಈ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಕೆಳ ಹಂತದ ಎಲ್ಲಾ ಉದ್ಯೋಗಿಗಳ ಸಹಕಾರ, ಮಾರ್ಗದರ್ಶನದಿಂದ ಉತ್ತಮ ಸೇವೆ ಸಲ್ಲಿಸಿರುವ ಸಂತಸ ತಮಗಿದೆ ಎಂದು ಅಭಿಪ್ರಾಯಪಟ್ಟರು.

(ಮೊದಲ ಪುಟದಿಂದ) ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ಮನೆಗಳ ನಿರ್ಮಾಣ, ಜಾಗ ಗುರುತಿಸುವಿಕೆ, ಪುನರ್ವಸತಿ ಹಂಚಿಕೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲು ಕೊಡಗು ಜಿಲ್ಲಾಡಳಿತ ಮುಕ್ತ ಹೊಣೆಗಾರಿಕೆ ನೀಡಿದ್ದು, ತೃಪ್ತಿಕರವೆಂದು ಜವರೇಗೌಡ ನೆನಪಿಸಿಕೊಂಡರು.

ಕೊಡಗಿನಲ್ಲಿ ಕಷ್ಟಕರ ಪರಿಸ್ಥಿತಿಯ ದಿನಗಳಲ್ಲಿ ತಮಗೆ ಜನತೆಯ ಸೇವೆಗೆ ಸಿಕ್ಕ ಅವಕಾಶ ಹಾಗೂ ಜಿಲ್ಲೆಯಲ್ಲಿನ ಸೇವೆಯ ದಿನಗಳು ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಅವರು ನುಡಿದರಲ್ಲದೆ, ಮಾಧ್ಯಮಗಳ ಸಹಕಾರಕ್ಕೂ ಪ್ರಶಂಸೆಯ ನುಡಿಯಾಡಿದರು.

ನೂತನ ಅಧಿಕಾರಿ : ಉತ್ತರಪ್ರದೇಶ ಮೂಲದ ಐಎಎಸ್ ಅಧಿಕಾರಿ ಈಶ್ವರ ಕುಮಾರ್ ಖಂಡು ಅವರು ಪ್ರೊಬೆಷನರಿ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕರ್ತವ್ಯದೊಂದಿಗೆ ಇದೀಗ ಕೊಡಗಿಗೆ ನೇಮಕ ಗೊಂಡಿದ್ದು, ಸಂದರ್ಶನಕ್ಕೆ ಲಭ್ಯರಾಗಿಲ್ಲ.

ಜಿ.ಪಂ.ಗೆ ನೇಮಕ : ಅಂತೆಯೇ ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೆ. ಲಕ್ಷ್ಮೀಪ್ರಿಯ ಅವರು ಮಾತೃತ್ವ ರಜೆಯಲ್ಲಿ ತೆರಳಿರುವ ಬೆನ್ನಲ್ಲೇ ನೂತನ ಅಧಿಕಾರಿಯಾಗಿ ಬನ್ಸಾರ್ ಸಿಂಗ್ ಮೀನ (ಐಎಎಸ್) ನೇಮಕಗೊಂಡಿದ್ದಾರೆ. ತಾ. 26 ರಂದು (ಇಂದು) ಅಧಿಕಾರ ಸ್ವೀಕರಿಸಲಿರುವ ಅವರು, ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಉಪವಿಭಾಗಾಧಿಕಾರಿಯಾಗಿ ಪ್ರೊಬೆಷನರಿ ಸೇವೆಯಲ್ಲಿದ್ದರೆಂದು ಮಾಹಿತಿ ಲಭಿಸಿದೆ.