ಮಡಿಕೇರಿ, ಆ. 25: ಭಾರತೀಯ ಭೂಸೇನಾ ಮುಖ್ಯಸ್ಥ (ಜನರಲ್)ರಾಗಿರುವ ಮನೋಜ್ ಮುಕುಂದ್ ನರ್ವಾನೆ ಅವರ ಎಡಿಸಿ ಆಗಿ ಜಿಲ್ಲೆಯವರಾದ ಕ್ಯಾಪ್ಟನ್ ಮಾಳೇಟಿರ ಎಸ್. ಮುತ್ತಪ್ಪ ಅವರು ನೇಮಕಗೊಂಡಿದ್ದಾರೆ.ಎಡಿಸಿ (ಂiಜe -ಆe- ಅಚಿmಠಿ ಣo ಅhieಜಿ oಜಿ ಂಡಿmಥಿ Sಣಚಿಜಿಜಿ ) ಇದು ಸೇನಾ ಮುಖ್ಯಸ್ಥರ ಆಪ್ತ ಕಾರ್ಯದರ್ಶಿಯಂತಹ ಜವಾಬ್ದಾರಿಯಾಗಿದೆ.

2016ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ ಮೂಲಕ ಕಮೀಷನ್ಡ್ ಅಧಿಕಾರಿಯಾಗಿ ಸೇನೆಗೆ ಸೇರ್ಪಡೆಯಾಗಿದ್ದ ಮುತ್ತಪ್ಪ ನವದೆಹಲಿಯ ಸೌತ್ ಬ್ಲಾಕ್‍ನಲ್ಲಿ ಮಿನಿಸ್ಟರಿ ಆಫ್ ಡಿಫೆನ್ಸ್‍ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಇದೀಗ ಈ ಜವಾಬ್ದಾರಿಗೆ ನಿಯುಕ್ತಿಗೊಂಡಿದ್ದಾರೆ. ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಸ್ಥಾನದ ಅಧಿಕಾರಿಗಳಿಗೂ ಎಡಿಸಿ ಇರುತ್ತಾರಾದರೂ ನಿಯುಕ್ತಿಯಾದವರು ಅವರ ಹೆಸರಿನ ಮುಂದೆ ಎಡಿಸಿ ಎಂದು ಬಳಸುವಂತಿಲ್ಲ. ಇದು ಸೇನೆಯ ಮುಖ್ಯಸ್ಥರು (ಜನರಲ್) ಅಥವಾ ರಾಷ್ಟ್ರಪತಿ ಅವರ ಎಡಿಸಿಯಾಗಿ ನೇಮಕವಾದವರಿಗೆ ಮಾತ್ರ ಅವಕಾಶ ಇದೆ.

ಈ ಹಿಂದೆ ಕೊಡಗಿನ ನಾಲ್ವರು ಅಧಿಕಾರಿಗಳು ಈ ಸ್ಥಾನ ಪಡೆದಿದ್ದಾರೆ. 1953ರಲ್ಲಿ ಮೇಜರ್ ಕೋದಂಡ ಕಾರ್ಯಪ್ಪ (ಬಳಿಕ ಬ್ರಿಗೇಡಿಯರ್ ನಿವೃತ್ತ) 1973ರಲ್ಲಿ ಬುಟ್ಟಿಯಂಡ ಕೆ. ಬೋಪಣ್ಣ (ನಿವೃತ್ತ ಲೆಫ್ಟಿನೆಂಟ್ ಜನರಲ್) 1986ರಲ್ಲಿ ಪಟ್ಟಚೆರವಂಡ ಸಿ. ತಿಮ್ಮಯ್ಯ (ನಿವೃತ್ತ ಲೆಫ್ಟಿನೆಂಟ್ ಜನರಲ್) 2000ದಲ್ಲಿ ಹುತಾತ್ಮರಾದ ಮೇಜರ್ ಮಂಗೇರಿರ ಮುತ್ತಣ್ಣ ಅವರು ಸೇನಾ ಮುಖ್ಯಸ್ಥರ ಎಡಿಸಿಗಳಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಇದೀಗ ಮಾಳೇಟಿರ ಮುತ್ತಪ್ಪ ಅವರು ಈ ಸ್ಥಾನಕ್ಕೆ ಆಯ್ಕೆಯಾಗಿರುವ ಕೊಡವ ಜನಾಂಗದ ಐದನೇ ಅಧಿಕಾರಿಯಾಗಿದ್ದಾರೆ.

ಗೋಣಿಕೊಪ್ಪ ಲಯನ್ಸ್ ವಿದ್ಯಾನಿಕೇತನದಲ್ಲಿ ವ್ಯಾಸಂಗ ಹಾಗೂ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪಡೆದ ಇವರು ಸೇನೆಗೆ ಆಯ್ಕೆಗೊಂಡಿದ್ದರು. ಇವರು ಮೂಲತಃ ಜಿಲ್ಲೆಯ ಕೆದಮುಳ್ಳೂರಿನವರಾದ ಮಾಳೇಟಿರ ರತ್ನ ಸುಬ್ಬಯ್ಯ ಹಾಗೂ ಉಷಾ ದಂಪತಿಯ ಪುತ್ರರಾಗಿದ್ದಾರೆ.