ಮಡಿಕೇರಿ, ಆ. 25: ಭಾರತ ಸರಕಾರದ ನಾಮಫಲಕದೊಂದಿಗೆ ಕಳೆದ ತಾ. 16 ರಿಂದ ಮಡಿಕೇರಿ ಸುತ್ತಮುತ್ತ ಓಡಾಡುತ್ತಿದ್ದ ಕಾರೊಂದು ಇದೀಗ ಪೊಲೀಸರ ಪ್ರಾಥಮಿಕ ತನಿಖೆಯ ಸಂದರ್ಭ ಕೇಂದ್ರ ಸಚಿವರೊಬ್ಬರೊಂದಿಗೆ ಥಳುಕು ಹಾಕಿಕೊಂಡಿದೆ. ಈ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ತಾನು ಕೇಂದ್ರ ಸಾಮಾಜಿಕ ನ್ಯಾಯ ಮಂತ್ರಾಲಯದ ಪ್ರತಿನಿಧಿಯೆಂದು ಪೊಲೀಸರು ಮಾಹಿತಿ ಕಲೆ ಹಾಕಿದ ವೇಳೆ ಪರಿಚಯಿಸಿ ಕೊಂಡಿರುವದು ಖಾತರಿಯಾಗಿದೆ.ಅಲ್ಲದೆ ‘ಶಕ್ತಿ’ಗೆ ಲಭಿಸಿರುವ ನಿಖರ ಮಾಹಿತಿ ಪ್ರಕಾರ, ಸಂಬಂಧಿಸಿದ ವ್ಯಕ್ತಿ ಕೇಂದ್ರ ಸರಕಾರದ ಫಲಕವಿದ್ದ ಕಾರು ಹಾಗೂ ಇನ್ನೊಂದು ಖಾಸಗಿ ಕಾರಿನಲ್ಲಿ ಒಟ್ಟು ಎಂಟು ಮಂದಿಯೊಂದಿಗೆ ಬಂದಿರುವದು ತಿಳಿದು ಬಂದಿದೆ. ನಗರದ ಹೊರವಲಯದ ಪ್ರತಿಷ್ಠಿತ ರೆಸಾರ್ಟ್‍ವೊಂದರಲ್ಲಿ ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ದಿವಸ ತಂಗಿದ್ದಾಗಿಯೂ ತಿಳಿದು ಬಂದಿದೆ.ಮಡಿಕೇರಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈ ಕಾರಿನ ಕುರಿತು ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿಷಯ ಮುಟ್ಟಿಸಿದ ಬೆನ್ನಲ್ಲೇ, ಮಡಿಕೇರಿ ನಗರ ಠಾಣೆ ಪೊಲೀಸರು ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್ ನಿರ್ದೇಶನದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರ ಮಾರ್ಗದರ್ಶನದಲ್ಲಿ ಈ ವಾಹನದ ಬೆನ್ನೇರಿ ವಿವರ ಪತ್ತೆಗೆ ಮುಂದಾಗಿದ್ದಾರೆ. ಈ ಸಂದರ್ಭ ಸಂಬಂಧಿಸಿದ ವ್ಯಕ್ತಿಗಳು ಕಾರಿನಲ್ಲಿ ಮೇಕೇರಿಯ ರೆಸಾರ್ಟ್‍ಗೆ ತೆರಳಿ ಅಲ್ಲೇ ತಂಗಿರುವ ಮಾಹಿತಿ ಲಭಿಸಿದೆ.

ಸಚಿವರ ಹೆಸರು ಥಳುಕು : ಪೊಲೀಸರು ಕಾರಿನಲ್ಲಿದ್ದ ಮಂದಿಯ ಪೂರ್ವಾಪರ ವಿಚಾರಿಸಲಾಗಿ, ಮಹಾರಾಷ್ಟ್ರ ಮೂಲದ ಕೇಂದ್ರ ಸಾಮಾಜಿಕ ನ್ಯಾಯ ಮಂತ್ರಾಲಯ ಸಹಾಯಕ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಂಸದ ರಾಮದಾಸ್ ಅಠವಾಳೆ ಹೆಸರು ಥಳುಕು ಹಾಕಿಕೊಂಡಿದೆ.

ಸರಕಾರದ ಫಲಕ ಹೊಂದಿದ ಕಾರಿನಲ್ಲಿದ್ದ ವ್ಯಕ್ತಿ ತನ್ನನ್ನು ಡಾ. ಮಹಮ್ಮದ್ ಗಯಾಸುದ್ದೀನ್ ಎಂದು ಪರಿಚಯಿಸಿಕೊಂಡಿದ್ದಲ್ಲದೆ, ಸಂಬಂಧಿಸಿದ ಸಚಿವರ ಹಸ್ತಾಕ್ಷರವಿದೆ ಎನ್ನಲಾದ ಗುರುತು ಚೀಟಿ ಪ್ರದರ್ಶಿಸಿರುವದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ತಾನು ಹಾಗೂ ತನ್ನ ಸಂಗಡಿಗರು ಬೆಂಗಳೂರಿನವರೆಂದು ಈ ವ್ಯಕ್ತಿ ಹೇಳಿಕೊಂಡಿದ್ದಾಗಿಯೂ, ಮಹಾರಾಷ್ಟ್ರ ಮೂಲದ ಕೇಂದ್ರ ಸಚಿವರ ಹೆಸರು ಹೇಳಿಕೊಂಡು ರೆಸಾರ್ಟ್‍ನಲ್ಲಿ ತಂಗಿರುವದು ಜನವಲಯದ ಅನುಮಾನಕ್ಕೆ ಕಾರಣವಾಗಿದೆ.

ಈ ಸಂಬಂಧ ಪೊಲೀಸರು ಈ ವ್ಯಕ್ತಿಗಳ ನೈಜ ಹಿನ್ನೆಲೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ತನಿಖೆಯ ಬಳಿಕವಷ್ಟೇ ನೈಜಾಂಶ ಹೊರಬೀಳಬೇಕಿದೆ.