ಭಾಗಮಂಡಲ, ಆ. 24: ತಾಯಿ ಕಾವೇರಿ ಮತ್ತು ಭಕ್ತರ ನಡುವಿನ ಪ್ರಾರ್ಥನೆಯನ್ನು ನೇರವಾಗಿ ಕಾವೇರಿ ಮಾತೆಗೆ ತಲುಪಿಸುವ ಕೆಲಸ ಮಾಡುತ್ತಿದ್ದ ನಾರಾಯಣಾಚಾರ್ ಅವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.

ಸಂಘ ಪರಿವಾರದ ವತಿಯಿಂದ ಕಾಶಿಮಠದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭೂ ಕುಸಿತದಿಂದ ಮೃತರಾದ ಅರ್ಚಕ ಕುಟುಂಬದ ಐದು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಆಚಾರ್ಯರು ಧೃತಿಗೆಡದೆ ಕೆಲಸ ಮಾಡುತ್ತಿದ್ದರು. ಇಂದು ಅವರು ಕೆಲವು ಆದರ್ಶ ಗುಣಗಳನ್ನು ಬಿಟ್ಟುಹೋಗಿದ್ದಾರೆ. ಅವರ ಆದರ್ಶ ಗುಣಗಳನ್ನು ನಾವು ಪಾಲಿಸಿದರೆ ಅವರಿಗೆ ನಿಜವಾಗಿ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಎಂದರು.

ಶಾಂತಾ ಆಚಾರ್ ಮತ್ತು ಶ್ರೀನಿವಾಸ ಪಡ್ಡಿಲಾಯ ಇವರ ಶರೀರವು ಸಿಗದೇ ಇರುವುದು ದುಃಖಕರ ವಿಷಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಆರ್‍ಎಸ್‍ಎಸ್ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ವಹಿಸಿದ್ದರು. ಹಿರಿಯರಾದ ಎಂ.ಬಿ. ದೇವಯ್ಯ, ಕೋಡಿ ಪೊನ್ನಪ್ಪ, ಕುದುಕುಳಿ ಭರತ್, ಮನುಮುತ್ತಪ್ಪ, ಕೋಳಿಬೈಲು ಕುಶ್ವಂತ್ ಮೊದಲಾದವರು ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಕಾರ್ಯಕ್ರಮದಲ್ಲಿ ನಾರಾಯಣಾಚಾರ್ ಕುಟುಂಬದವರು ಭಾಗಿಯಾಗಿದ್ದರು. ಸಂಘ ಪರಿವಾರದ ದಿನೇಶ್, ಚೇತನ್, ಮಹೇಶ್, ಭಾಗಮಂಡಲದ ಚಲನ್, ಪ್ರಸನ್ನ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.