ಸೋಮವಾರಪೇಟೆ,ಆ.23: ಹೂಳು ತೆಗೆದ ನಂತರ ವರ್ಷವಿಡೀ ನೀರು ಶೇಖರಣೆ ಇರುವ ಪಟ್ಟಣದ ಆನೆಕೆರೆ ಮತ್ತು ಯಡೂರು ಗ್ರಾಮದ ದೇವರ ಕೆರೆಗೆ ಉದ್ಯಮಿಗಳಾದ ಹರಪಳ್ಳಿ ರವೀಂದ್ರ ಅವರು ಬಾಗಿನ ಅರ್ಪಿಸಿ, ತುಂಬಿರುವ ಕೆರೆಗಳಿಗೆ ಪೂಜೆ ಸಲ್ಲಿಸಿದರು.

ಇಲ್ಲಿನ ಆನೆಕೆರೆಯಲ್ಲಿ ಅರ್ಚಕ ಗಣಪತಿ ಭಟ್ ಅವರ ಪೌರೋಹಿತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು. ಗ್ರಾಮದ ಸುಭೀಕ್ಷೆಗಾಗಿ ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಯಡೂರು ದೇವರ ಕೆರೆಯಲ್ಲಿ ಅರ್ಚಕ ಸರ್ವೇಶ್ ಭಟ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.

ಈ ಸಂದರ್ಭ ಮಾತನಾಡಿದ ರವೀಂದ್ರ ಅವರು, ಕೊಡಗಿನಲ್ಲಿ ಹಲವಷ್ಟು ಕೆರೆಗಳು ಹೂಳುತುಂಬಿದ್ದು, ಬೇಸಿಗೆಯಲ್ಲಿ ಅಂತರ್ಜಲವಿಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ಹೂಳು ತುಂಬಿ ಪಾಳು ಬಿದ್ದಿರುವ ಕೆರೆಗಳಿಗೆ ಜೀವ ತುಂಬು ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಕೊಡಗಿನ ಮಟ್ಟಿಗೆ ವಿಶೇಷ ಗಮನ ಹರಿಸಿ ಅಂತರ್ಜಲ ವೃದ್ಧಿಗೆ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಅಭಿಪ್ರಾಯಿಸಿದರು.

ಉದ್ಯಮಿ ಗಿರೀಶ್ ಮಲ್ಲಪ್ಪ ಮಾತನಾಡಿ, ರವೀಂದ್ರ ಅವರು ಕಳೆದೆರಡು ವರ್ಷಗಳ ಹಿಂದೆ ತಮ್ಮ ಸ್ವಂತ ಹಣದಿಂದ ಸುಮಾರು 14 ಲಕ್ಷ ವ್ಯಯ ಮಾಡಿ ಎರಡೂ ಕೆರೆಗಳನ್ನು ಹೂಳು ತೆಗೆಸಿದ್ದು, ಇದರಿಂದಾಗಿ ಜನ-ಜಾನುವಾರುಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.

ಆನೆಕೆರೆಯಲ್ಲಿ ಬಾಗಿನ ಅರ್ಪಿಸಿದ ಸಂದರ್ಭ ಪ್ರಮುಖರಾದ ಅರುಣ್ ಕೊತ್ನಳ್ಳಿ, ಚಕ್ರವರ್ತಿ ಸುರೇಶ್, ದಯಾನಂದ್, ಪ್ರಸ್ಸಿ, ಶೇಷಪ್ಪ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ ಆನಂದ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಯಡೂರು ದೇವರ ಕೆರೆಗೆ ಬಾಗಿನ ಅರ್ಪಿಸುವ ಸಂದರ್ಭ ಯಡೂರು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಟಿ. ಚಂಗಪ್ಪ, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ವಿಜಯಕುಮಾರ್, ಪ್ರಮುಖರಾದ ಕುಶಾಲಪ್ಪ, ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.