ಸೋಮವಾರಪೇಟೆ, ಆ. 23: ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆಯಿಂದ ಮೊಬೈಲ್ ಆ್ಯಪ್ “ಫಾರ್ಮರ್ಸ್ ಕ್ರಾಪ್ ಸರ್ವೆ ಆ್ಯಪ್ 2020-21” ಬಿಡುಗಡೆಗೊಳಿಸಿದ್ದು, ರೈತರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಇಲಾಖೆಯಿಂದ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ತಮ್ಮ ಗ್ರಾಮಗಳಿಗೆ ನೇಮಿಸಿರುವ ಖಾಸಗಿ ನಿವಾಸಿಗಳ ಮಾಹಿತಿಯನ್ನು ಸ್ಥಳೀಯ ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹಾಗೂ ಕಂದಾಯ ಇಲಾಖಾಧಿಕಾರಿಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ವಾರ ಸುರಿದ ಭಾರೀ ಮಳೆ - ಗಾಳಿಗೆ ಅಪಾರ ಬೆಳೆ ನಷ್ಟವಾಗಿದೆ. ಈ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಇಲಾಖೆಯವರು ಖುದ್ದಾಗಿ ತೆರಳಿ ಬೆಳೆ ಸಮೀಕ್ಷೆ ನಡೆಸಲು ಸೂಚನೆ ನೀಡಿದರೂ ಅದರಂತೆ ಬೆಳೆ ಸಮೀಕ್ಷೆ ಕಾರ್ಯ ಅರಂಭ ಮಾಡಿದ್ದಾರೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಅಳುವಾರ, ಸಿದ್ದಲಿಂಗಪುರ, ಮಾರೂರು, 6ನೇ ಹೊಸಕೋಟೆ, ಬೈರಪ್ಪನಗುಡಿ ಭಾಗಗಳಲ್ಲಿ ಆಯಾ ವ್ಯಾಪ್ತಿಯಲ್ಲಿ ರೈತರು ಬೆಳೆದ ವಿವಿಧ ಬೆಳೆ ಸಮೀಕ್ಷೆ ಮಾಡಲು ಪ್ರಾರಂಭಿಸಿದ್ದಾರೆ.

ಸಮೀಕ್ಷೆಯ ಕಾರ್ಯದಲ್ಲಿ ಕೃಷಿ ತೋಟಗಾರಿಕೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ರೈತರ ಮೊಬೈಲ್‍ನಲ್ಲಿ ನೋಂದಣಿ ಆ್ಯಪ್ ಅಳವಡಿಕೆ ಮಾಡಿಕೊಂಡು ಸ್ವತಃ ರೈತರೇ ಬೆಳೆ ನೋಂದಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.