ಭಾರತದ ಕಾಶ್ಮೀರ, ಕಾವೇರಿ ತಾಯಿಯ ಜನ್ಮ ಭೂಮಿ, ವೀರರ, ಶೂರರ ನಾಡು ಎಂದು ಹೆಸರುವಾಸಿಯಾಗಿರುವ ಕೊಡಗು, ಹಸಿರು ಕಾನನ, ಬೆಟ್ಟಗುಡ್ಡ, ಝರಿತರಿ, ಜಲಪಾತ ಮತ್ತು ನಯನ ಮನೋಹರವಾದ ಪರಿಸರದಿಂದ ಕಂಗೊಳಿಸುತ್ತಿರುವ ಸುಂದರವಾದ ನಾಡು. ಕೊಡಗು ನೈಸರ್ಗಿಕ ಪ್ರವಾಸೋದ್ಯಮದ ತಾಣವಾಗಿದೆ. ಇಲ್ಲಿನ ರಮಣೀಯವಾದ ಪರಿಸರ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ತನ್ನ ಬಳಿ ಕೈಬೀಸಿ ಕರೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯು ಕೇರಳದ ಮನ್ನಾರನ್ನು ಬಿಟ್ಟರೆ ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ಖ್ಯಾತಿ ಪಡೆದಿದೆ.

ಕಳೆದ ಒಂದು ದಶಕಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮವು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಅಲ್ಲದೆ ಸಾವಿರಾರು ಜನರಿಗೆ ಅನ್ನವನ್ನು ಮತ್ತು ಬದುಕುವ ದಾರಿಯನ್ನು ತೋರಿಸಿದೆ. ಆದರೆ ಇನ್ನೊಂದೆಡೆಯಲ್ಲಿ ಪರಿಸರದ ಮೇಲೆ ಪ್ರತಿಕೂಲವಾದ ಪರಿಣಾಮವನ್ನೂ ಉಂಟುಮಾಡಿದೆ ಎಂಬದನ್ನೂ ಮರೆಯುವಂತಿಲ್ಲ.

ಕೊಡಗು ಎಂದರೆ ಮಲೆನಾಡು, ಮಳೆಯನಾಡು ಎಂದು ಹೆಸರುವಾಸಿಯಾಗಿದೆ. ಮಳೆಗಾಲ ಕೊಡಗಿಗೆ ಹೊಸತಲ್ಲ. ಕಳೆದ ಎರಡು ಮೂರು ದಶಕಗಳ ಹಿಂದೆ ಕೊಡಗಿನಲ್ಲಿ ವರ್ಷದ ಆರು ತಿಂಗಳ ಕಾಲ ಮಳೆಗಾಲವಾಗಿರುತ್ತಿತ್ತು. ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೂ, ಕೆಲವೊಮ್ಮೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲೂ ಮಳೆ ಹಾಗೂ ಪ್ರವಾಹ ಉಂಟಾಗಿರುವ ಸಂದರ್ಭವನ್ನು ನೋಡಿರುವೆವು. 90ರ ದಶಕದ ನಮ್ಮ ಬಾಲ್ಯದ ದಿನಗಳಲ್ಲಿ ಶಾಲೆಗೆ ಹೋಗುವ ಕಾಲಘಟ್ಟದಲ್ಲಿ ಒಂದು ತಿಂಗಳ ಕಾಲ ಮಳೆಗಾಲದ ರಜೆಯ ಮಜವನ್ನು ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಚಾರ.

ಶತಮಾನಗಳಿಂದಲೂ ಕೊಡಗಿನ ಜನರು ನೆಲೆಸಿರುವುದು ಬೆಟ್ಟದ ತುದಿಯಲ್ಲಿ, ನದಿಯ ದಂಡೆಯ ಮೇಲೆ. ಹಾಗಾಗಿ ಕೊಡಗಿನ ಜನರಿಗೆ ಮಳೆಯ ಭಯವಿರಲಿಲ್ಲ. ಒಂದು ತಿಂಗಳ ಕಾಲ ನದಿಯ ಪ್ರವಾಹದಿಂದ, ಭೂಕುಸಿತದಿಂದ ವಿದ್ಯುಚ್ಛಕ್ತಿ, ದೂರವಾಣಿ, ರಸ್ತೆ ಸಂಪರ್ಕ ಕಳೆದುಕೊಂಡರು ಯಾವುದೇ ಭಯಭೀತರಾಗದೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ದಿನದಲ್ಲಿ ನಿರಂತರವಾಗಿ ಮಳೆ ಸುರಿದರೆ ಕೊಡಗಿನ ಜನರ ಎದೆ ಢವ-ಢವ ಎಂದು ಬಡಿಯಲು ಶುರುವಾಗುತ್ತದೆ. ಯಾಕಪ್ಪಾ ಮಳೆಗಾಲ ಬರುತ್ತಿದೆ, ಈ ವರ್ಷ ಯಾರ ಪ್ರಾಣವನ್ನು ತೆಗೆಯುತ್ತದೆ, ಯಾರ ಆಸ್ತಿ-ಪಾಸ್ತಿ ನಾಶವಾಗುತ್ತದೋ ಎಂಬ ಭಯದ ವಾತಾವರಣನ್ನು ಹುಟ್ಟುಹಾಕಿದೆ.

ಆಗಸ್ಟ್ 16, 2018ರಂದು ಕೊಡಗು ಜೆಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವಾರು ಭಾಗಗಳಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಹಲವಾರು ಜನರು ತಮ್ಮ ಪ್ರಾಣ, ಮನೆ, ಆಸ್ತಿ-ಪಾಸ್ತಿ ಮೊದಲಾದವುಗಳನ್ನು ಕಳೆದುಕೊಂಡು ನಿರ್ಗತಿಕರಾಗಿರುವರು. ಹಲವಾರು ಮಂದಿ ತಮ್ಮ ಮನೆಯನ್ನು ಕಳೆದುಕೊಂಡು ಹಲವಾರು ತಿಂಗಳ ಕಾಲ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯವನ್ನು ಪಡೆದಿದ್ದರು.

2018ರ ಭೂಕುಸಿತ ಮತ್ತು ಪ್ರವಾಹದ ನೋವಿನಿಂದ ಜನರು ಹೊರ ಬರುವ ಮೊದಲೇ, 2019ರ ಆಗಸ್ಟ್ 9 ರಂದು ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಸಂಭವಿಸಿದ ಭೀಕರವಾದ ಭೂಕುಸಿತದಿಂದ ಹತ್ತು ಮಂದಿ ಮತ್ತು ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಐದು ಮಂದಿ ಜೀವಂತ ಸಮಾಧಿಯಾದರು. ಅಲ್ಲದೆ ಕೊಡಗಿನ ಇತರ ಭಾಗಗಳ ಲೆಕ್ಕಕ್ಕೆ ಸಿಗದಷ್ಟು ಆಸ್ತಿಪಾಸ್ತಿ ಕೊಚ್ಚಿಹೋಗಿರುವುದನ್ನು ಕಾಣಬಹುದು.

(ಮುಂದುವರಿಯುವುದು)

- ಡಾ. ಕೆ.ಸಿ. ದಯಾನಂದ ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ. ಮೊ. 9449766772.