ಸೋಮವಾರಪೇಟೆ,ಆ.23: ಸಮೀಪದ ಕಾಗಡಿಕಟ್ಟೆ ಗ್ರಾಮದ ಅಯ್ಯಪ್ಪ ಕಾಲೋನಿಯ ಮೈದಾನದಲ್ಲಿ ನಿನ್ನೆ ಸಂಜೆ ಎರಡು ಗುಂಪುಗಳ ನಡುವೆ ಕಲಹ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಪೊಲೀಸರು ಧಾವಿಸಿ ಲಾಠಿ ಬೀಸಿದ ಘಟನೆ ನಡೆಯಿತು.

ಅಯ್ಯಪ್ಪ ಕಾಲೋನಿಯ ಪಕ್ಕದಲ್ಲಿರುವ ಮೈದಾನದಲ್ಲಿ ಈ ಹಿಂದಿನಿಂದಲೂ ಅಕ್ರಮವಾಗಿ ಇಸ್ಪೀಟ್, ಗೋಲಿ, ಕವಡೆ ಜೂಜು, ಗಾಂಜಾ ಸೇವನೆ ನಡೆಯುತ್ತಿದ್ದು, ನಿನ್ನೆ ದಿನ ಕಾಗಡಿಕಟ್ಟೆಯ 20ಕ್ಕೂ ಅಧಿಕ ಯುವಕರು ಮೈದಾನದಲ್ಲಿ ಜಮಾವಣೆಯಾಗಿದ್ದರು ಎನ್ನಲಾಗಿದೆ.

ಈ ಸಂದರ್ಭ ಬೈಕ್‍ನಲ್ಲಿ ಆಗಮಿಸಿದ ಕೆಲ ಯುವಕರು ಮೈದಾನದ ಬಳಿ ಕೆಳಗಿಳಿದ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟಿದ್ದು, ನಂತರ ಇದು ಗುಂಪು ಘರ್ಷಣೆಯ ಹಂತಕ್ಕೆ ತಲುಪಿದೆ. ಮೈದಾನದಲ್ಲಿ 40ಕ್ಕೂ ಅಧಿಕ ಯುವಕರು ಜಮಾವಣೆಗೊಂಡು ಪರಸ್ಪರ ತಳ್ಳಾಟ ನೂಕಾಟದಲ್ಲಿ ತೊಡಗಿದ್ದ ಸಂದರ್ಭ ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳು, ಮೀಸಲು ಪಡೆಯ ಪೊಲೀಸರು ತೆರಳಿದ್ದು, ಪೊಲೀಸರನ್ನು ಕಂಡ ಸಂದರ್ಭ ಯುವಕರು ಚಲ್ಲಾಪಿಲ್ಲಿಯಾಗಿದ್ದಾರೆ. ಮೈದಾನದಲ್ಲಿ ಸಿಕ್ಕಿಹಾಕಿಕೊಂಡ ಕೆಲ ಯುವಕರಿಗೆ ಲಾಠಿ ರುಚಿ ತೋರಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

ಅಯ್ಯಪ್ಪಕಾಲೋನಿಯ ಮೈದಾನದಲ್ಲಿ ಈ ಹಿಂದಿನಿಂದಲೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಗಾಂಜಾ ವ್ಯಸನಿಗಳು ಇಲ್ಲಿ ಕಾಲ ಕಳೆಯುತ್ತಿರುತ್ತಾರೆ. ಇದರೊಂದಿಗೆ ಜೂಜು ಅಡ್ಡೆಗಳು ತಲೆಎತ್ತಿದ್ದು, ಪೊಲೀಸರ ಭಯವೂ ಇಲ್ಲದಂತಾಗಿದೆ. ಪೊಲೀಸ್ ಸಿಬ್ಬಂದಿಗಳು ಈ ಭಾಗದಲ್ಲಿ ಗಸ್ತು ನಡೆಸಿದರೆ ಅಕ್ರಮಗಳಿಗೆ ಕಡಿವಾಣ ಹಾಕಬಹುದು ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಗಾಂಧಿನಗರದಲ್ಲಿ ಕಲಹ: ಇದರೊಂದಿಗೆ ನಿನ್ನೆ ಮಧ್ಯಾಹ್ನ ಪಟ್ಟಣ ಸಮೀಪದ ಗಾಂಧಿನಗರದಲ್ಲೂ ಕಲಹ ನಡೆದಿದೆ. ಗೌರಿಗಣೇಶ ಹಬ್ಬದ ದಿನದಂದು ಗಾಂಧಿನಗರದ ಮೈದಾನದಲ್ಲಿ ‘ಕಾಯಿನ್ ಟಾಸ್’ ಮೂಲಕ ಜೂಜಾಟ ನಡೆಯುತ್ತಿದ್ದ ಸಂದರ್ಭ ಘರ್ಷಣೆ ಸಂಭವಿಸಿದೆ. ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವದೇ ದೂರು ದಾಖಲಾಗಿಲ್ಲ.

ಬೈಕ್ ಖರೀದಿಸಲು ಬಂದು ಬೈಕ್‍ನೊಂದಿಗೆ ಪರಾರಿ

ಶನಿವಾರಸಂತೆ, ಆ. 23: ಶನಿವಾರಸಂತೆಯ ಕಾನ್ವೆಂಟ್ ರಸ್ತೆಯ ನಿವಾಸಿ, ಸಚಿನ್ ಎಂಬಾತನಿಗೆ ಸೇರಿದ ರೂ. 2,52,000 ಲಕ್ಷ ಬೆಲೆಯ ಕೆ.ಎಂ.ಟಿ. ಬೈಕನ್ನು ಖರೀದಿಸಲೆಂದು ಬಂದು ವ್ಯಕ್ತಿಯೊಬ್ಬ ಬೈಕನ್ನು ‘ಟ್ರಯಲ್’ ನೋಡುವ ನೆಪದಲ್ಲಿ ಕೊಂಡೊಯ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಶನಿವಾರಸಂತೆ ಕಾನ್ವೆಂಟ್ ರಸ್ತೆಯ ನಿವಾಸಿ ಸಚಿನ್‍ಗೆ ಆತನ ತಂದೆ ರೂ. 2,52,000 ಬೆಲೆಯ ಕೆ.ಟಿ.ಎಂ. ಬೈಕ್ (ಕೆ.ಎ.12. ಎಸ್.9135) ಕೊಡಿಸಿದ್ದರು. ನಂತರ ಮನೆಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಬೈಕನ್ನು ಮಾರುವ ಸಲುವಾಗಿ ಸಚಿತ್ ತನ್ನ ಬೈಕ್‍ನ ಫೋಟೋ ತೆಗೆದು ಆನ್‍ಲೈನ್‍ನಲ್ಲಿ ಓಎಲ್‍ಎಕ್ಸ್‍ಗೆ ಹಾಕಿದ್ದು, ಪ್ರಜ್ವಲ್ ಎಂಬಾತ ತಾ. 21 ರಂದು ಶನಿವಾರಸಂತೆಗೆ ಬಂದು ಬೈಕ್ ಬಗ್ಗೆ ವಿಚಾರಿಸಿ ಟ್ರಯಲ್ ನೋಡುವ ನೆಪದಲ್ಲಿ ಬೈಕ್‍ನೊಂದಿಗೆ ಪರಾರಿಯಾಗಿದ್ದಾನೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.