ಸಾರ್ವಜನಿಕ ಸಂಪರ್ಕದಲ್ಲಿ ಕೆಲಸ ನಿರ್ವಹಿಸುವಾಗ ಎಷ್ಟೇ ಜಾಗೃತೆ ವಹಿಸಿದರೂ ಈಗಿನ ಮಾರಕ ಕೊರೊನಾ ಕಾಯಿಲೆಯು ಬರುವುದು ಎಂದು ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿದ ನನಗೆ ಆಗಿರುವ ಅನುಭವ. ನಾನು ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ಎಂದಿನಂತೆ ಕೊಡಗಿನೊಳಗೆ ಕರ್ತವ್ಯ ನಿರ್ವಹಿಸುತ್ತಿರುವಾಗ ಒಂದು ದಿವಸ ಸ್ವಲ್ಪ ಜ್ವರ ಮತ್ತು ಗಂಟಲು ನೋವು ಬಂದಿತ್ತು. ಆದರೆ ಎರಡು ದಿವಸ ಕಳೆದಂತೆ ನನಗೆ ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ ಕಡಿಮೆಯಾಗಿದ್ದಕ್ಕೆ ಮನಸ್ಸಿನಲ್ಲಿ ಆತಂಕ ಕಾಡಿತ್ತು. ಏಕೆಂದರೆ ಈ ಮಾರಕ ಕೊರೊನಾ ಕಾಯಿಲೆಯು ವಕ್ಕರಿಸಿಬಿಟ್ಟರೆ ನನ್ನ ಪರಿಸ್ಥಿತಿ ಏನಾಗಬಹುದು ಎಂದು ವೈದ್ಯರ ಸಲಹೆ ಪಡೆದು ಸ್ವಯಂ ಪರೀಕ್ಷೆಗೆ ಒಳಪಟ್ಟೆ. ಆದರೆ ನನ್ನ ಸಂದೇಹ ಸುಳ್ಳಾಗಲಿಲ್ಲ. ಮರುದಿನ ಕೋವಿಡ್-19 ಪಾಸಿಟಿವ್ ಎಂದು ಕರೆಬಂದಾಗ ನನಗೂ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಆದ ದುಃಖವನ್ನು ಮರೆಯಲು ಸಾಧ್ಯವಾಗುವುದಿಲ್ಲ.

ಆದರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ರೀತಿಯನ್ನು ಬಿಟ್ಟರೆ ಆಸ್ಪತ್ರೆಯ ಸಿಬ್ಬಂದಿ ವೃಂದದವರು ನೀಡಿದ ಉತ್ತಮ ಸ್ಪಂದನ ಮತ್ತು ಚಿಕಿತ್ಸೆಯಿಂದ ಕೆಲವೇ ದಿನದಲ್ಲಿ ಗುಣಮುಖನಾಗಿ ಮನೆಗೆ ಮರಳಿ ಬರಲು ಸಾಧ್ಯವಾಯಿತು. ಅಲ್ಲದೆ ನನ್ನ ಮೇಲಾಧಿಕಾರಿಯವರು ದೂರವಾಣಿ ಮೂಲಕ ನೀಡಿದು ಮತ್ತು ಬಂಧುಮಿತ್ರರು ನೀಡಿದ ಧೈರ್ಯದಿಂದ ಬೇಗ ಚೇತರಿಸಿಕೊಳ್ಳುವಂತಾಯಿತು. ಮನೆಗೆ ಬಂದ ಸಂತೋಷವು ಒಂದೆಡೆಯಾದರೆ, ಎರಡು ದಿನದಲ್ಲಿ ನನ್ನ ಕುಟುಂಬದವರಿಗೆ ಪ್ರಾರಂಭದಲ್ಲಿ ಕೊರೊನಾ ಸೋಂಕು ಎಂದು ಕರೆ ಬಂದಾಗ ಆಕಾಶವೇ ಕಳಚಿ ಬಿದ್ದ ಹಾಗೆ ಆಗಿತ್ತು! ಆದರೆ ನಾನು ಚಿಕಿತ್ಸೆ ಪಡೆದು ಬಂದಿರುವ ಅನುಭವದಿಂದ ಅವರಿಗೆ ಧೈರ್ಯ ತುಂಬಿ ಚಿಕಿತ್ಸೆಗೆ ಕಳುಹಿಸಲು ಸಹಾಯವಾಯಿತು. ಅವರು ಮಡಿಕೇರಿ ಜಿಲ್ಲಾಸ್ಪತ್ರೆ ಮತ್ತು ನವೋದಯ ಶಾಲೆಯಲ್ಲಿ ಇರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದರು. ಆದ್ದರಿಂದ ಯಾವುದೇ ಸಣ್ಣ ರೋಗ ಲಕ್ಷಣಗಳು ಬಂದರೆ ಮನೆಮದ್ದು ಮಾಡಿ, ಗುಣವಾಗದೇ ಇದ್ದಲ್ಲಿ ಆತಂಕಪಡದೇ ಧೈರ್ಯದಿಂದ ಪರೀಕ್ಷಿಸಿಕೊಂಡು ಉತ್ತಮ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಬಹುದು. ಅಲ್ಲದೆ ಸೋಂಕಿತ ವ್ಯಕ್ತಿಗೆ ಧೈರ್ಯತುಂಬಿ ಆಸ್ಪತ್ರೆಯಲ್ಲಿ ಒಂದು ವಾರ ಇರಲು ಬೇಕಾದ ಬಟ್ಟೆಬರೆ, ಫ್ಲಾಸ್ಕ್ ಮತ್ತು ಇತರ ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಮಾರ್ಗದರ್ಶನ ನೀಡುವುದು ಮತ್ತು ಆತಂಕಪಡದೆ ಧೈರ್ಯದಿಂದ ಹೆಚ್ಚಿನ ಜಾಗೃತೆಯಿಂದ ಇದ್ದರೆ ಈ ಕಾಯಿಲೆಯಿಂದ ಮುಕ್ತಿ ಪಡೆಯಬಹುದು ಎಂಬದು ನನ್ನ ಅನಿಸಿಕೆ. ಖಂಡಿತಾ ಆತಂಕ ಪಡಬೇಕಿಲ್ಲ.

- ಪ್ರೇಮ್‍ಕುಮಾರ್ ಪಿ.ಎನ್., ಮಡಿಕೇರಿ.