ಮಡಿಕೇರಿ, ಆ. 23: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಈ ಹಿಂದೆ ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಪದ್ಧತಿ-ಪರಂಪರೆಯನ್ನು ಮತ್ತೆ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೊಡವ ಸಮಾಜ ಸಹಮತ ವ್ಯಕ್ತಪಡಿಸಲಿದೆ ಎಂದು ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಸ್ತುತ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು, ಬೇಡಿಕೆಗಳು ಆರಂಭಗೊಂಡಿವೆ. ತಲಕಾವೇರಿ ಇತಿಹಾಸದಂತೆ ಹಿಂದಿನ ಕಾಲದಲ್ಲಿದ್ದ ಸಂಸ್ಕøತಿ-ಪರಂಪರೆ ಕಾಲಕ್ರಮೇಣ ಬದಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಈ ಕ್ಷೇತ್ರದಲ್ಲಿ ಹಿಂದಿನ ಪರಂಪರೆಯನ್ನೇ ಮತ್ತೆ ಮುಂದುವರಿಸಲು ಒತ್ತಾಯ ಕೇಳಿಬರುತ್ತಿರುವುದು ಸಮಂಜಸವೇ ಆಗಿದೆ. ಈ ವಿಚಾರದಲ್ಲಿ ಬೆಂಗಳೂರು ಕೊಡವ ಸಮಾಜವು ಇದಕ್ಕೆ ಸಹಮತ ವ್ಯಕ್ತಪಡಿಸಲಿದೆ ಎಂದು ಸಮಾಜದ ಪ್ರಮುಖರು ತಿಳಿಸಿದ್ದಾರೆ.

ಅ.ಕೊ.ಸ. ಸ್ವಾಗತ

ಕ್ಷೇತ್ರದಲ್ಲಿ ಹಿಂದಿನ ಪರಂಪರೆಯಂತೆ ಪೂಜೆಯ ಹೊಣೆಗಾರಿಕೆಯನ್ನು ಅಮ್ಮಕೊಡವ ಜನಾಂಗದವರಿಗೆ ವಹಿಸುವಂತೆ ಈ ಸಮಾಜದ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದನ್ನು ಅಖಿಲ ಕೊಡವ ಸಮಾಜ ಸ್ವಾಗತಿಸಿದೆ. ಈ ಕುರಿತು ಸಮಾಜದ ಗೌರವ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಪದಾಧಿಕಾರಿ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ಅವರುಗಳು ಹಿಂದಿನ ಪರಂಪರೆಯ ಮರು ಜಾರಿಗೆ ಸಮಾಜ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.