ಕಣಿವೆ, ಆ. 23 : ಏಳು ಕಾಡಾನೆಗಳ ಹಿಂಡು ಜೋಳದ ಹೊಲಕ್ಕೆ ಲಗ್ಗೆಯಿಟ್ಟ ಪರಿಣಾಮ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಜೋಳದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಹಾಳಾಗಿರುವ ಘಟನೆ ಅತ್ತೂರಿನಲ್ಲಿ ನಡೆದಿದೆ.
ಹಾರಂಗಿ ಬಳಿಯ ಅತ್ತೂರು ಗ್ರಾಮದ ರೈತ ಎಸ್.ಎಸ್. ಲೋಕೇಶ್ ಎಂಬವರಿಗೆ ಸೇರಿದ ಫಸಲು ತುಂಬಿದ್ದ ಜೋಳದ ಹೊಲಕ್ಕೆ ಶುಕ್ರವಾರ ರಾತ್ರಿ ಬಂದ ಕಾಡಾನೆಗಳ ಹಿಂಡು ಶನಿವಾರ ಬೆಳಗ್ಗೆ ಏಳು ಗಂಟೆಯವರೆಗೂ ಕಾಡಿನತ್ತ ತೆರಳದೆಯೇ ಜೋಳದ ಹೊಲದೊಳಗೆ ಸೇರಿದ್ದವು ಎಂದು ದೂರಿದ ರೈತ ಲೋಕೇಶ್, ಏಳು ಆನೆಗಳ ತುಳಿತಕ್ಕೆ ಜೋಳದ ಫಸಲು ನೆಲಕಚ್ಚಿದೆ. ಹೊಲದೊಳಗೆಲ್ಲಾ ಸುತ್ತಾಡಿ ತುಳಿದು ತಿಂದು ಹಾಕಿ ಇದರಿಂದಾಗಿ ಒಂದು ಲಕ್ಷ ನಷ್ಟ ಸಂಭವಿಸಿದೆ ಎಂದು ರೈತ ಲೋಕೇಶ್ ಗೋಳಿಟ್ಟರು.
ಕಾಡಾನೆಗಳು ಬೆಳಗ್ಗೆ ಏಳು ಗಂಟೆಯಾದರೂ ಹೊಲದೊಳಗೆ ಇದ್ದ ವಿಚಾರ ತಿಳಿದು ನೆರೆಹೊರೆಯ ಗ್ರಾಮಸ್ಥರ ಸಮ್ಮಖದಲ್ಲಿ ಮರಳಿ ಕಾಡಿಗೆ ಓಡಿಸಲಾಯಿತು. ಅತ್ತೂರು ಅರಣ್ಯದಿಂದ ಆಗಮಿಸಿದ್ದ ಕಾಡಾನೆಗಳ ಹಿಂಡು ಮತ್ತೆ ಅದೇ ಅರಣ್ಯದ ಕಡೆಗೆ ಗ್ರಾಮಸ್ಥರು ಓಡಿಸಿದರು. ಮಳೆಯಿಂದಲೂ ಈ ವಿಭಾಗದಲ್ಲಿ ನಷ್ಟವಾಗಿದೆ. ಕೂಡಲೇ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿ ಗಳು ಬೆಳೆ ಸಮೀಕ್ಷೆ ನಡೆಸಿ ಪರಿಹಾರ ದ ಹಣವನ್ನು ಕೊಡಿಸ ಬೇಕೆಂದು ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ರೈತ ಮುಖಂಡರಾದ ಮನೋಜ್, ನರೇಂದ್ರ, ಸುರೇಶ್ ಮೊದಲಾದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.