ಸೋಮವಾರಪೇಟೆ, ಆ. 20: ಕೊಡಗಿನ ಪಶ್ಚಿಮಘಟ್ಟದ ತಪ್ಪಲಿನ ಸೂರ್ಲಬ್ಬಿ ನಾಡಿನ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ, ಕಿಕ್ಕರಹಳ್ಳಿ, ಮಂಕ್ಯ, ಗರ್ವಾಲೆ ಗ್ರಾಮದ ಸುತ್ತಮುತ್ತ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆ ಬೀಳುತ್ತಿದೆ.

ಗುರುವಾರ ಮಧ್ಯಾಹ್ನ 12.30 ರಿಂದ 2 ಗಂಟೆಯವರೆಗೆ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳಲ್ಲಿ ತುಂಬಿ ಹರಿಯುತ್ತಿದ್ದ ದೃಶ್ಯ ಕಂಡುಬಂತು.

ಭಾರೀ ಮಳೆಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದ ಪರಿಣಾಮ ಕಳೆದ 15 ದಿನಗಳ ಕಾಲ ವಿದ್ಯುತ್ ಸಂಪರ್ಕವಿಲ್ಲದೆ ಜನರು ಕತ್ತಲೆಯಲ್ಲಿ ಜೀವನ ಸಾಗಿಸುವಂತಾಗಿತ್ತು. ಈ ವೇಳೆಯಲ್ಲಿ ದೂರವಾಣಿ ಸಂಪರ್ಕವಿಲ್ಲದೆ ಜನರು ಪರಿತಪಿಸುವಂತಾಯಿತು. ಇದೀಗ ಸೆಸ್ಕ್ ಸಿಬ್ಬಂದಿಗಳು ಮಳೆಯನ್ನು ಲೆಕ್ಕಿಸದೆ ವಿದ್ಯುತ್ ಲೈನ್ ಸರಿಪಡಿಸಿದ ಕಾರಣ ಇದೀಗ ಜನರಿಗೆ ಬೆಳಕಿನ ಭಾಗ್ಯ ಬಂದಿದೆ ಎಂದು ತಿಳಿದುಬಂದಿದೆ.

ಭಾರೀ ಮಳೆಯ ಕಾರಣ ಕಳೆದ ಒಂದು ತಿಂಗಳಿನಿಂದ ಗರ್ವಾಲೆ , ಸೂರ್ಲಬ್ಬಿ, ಕುಂಬಾರಗಡಿಗೆ ಮಾರ್ಗದಲ್ಲಿ ಸಾರಿಗೆ ಸಂಪರ್ಕವಿಲ್ಲದೆ ಜನರಿಗೆ ತುಂಬಾ ತೊಂದರೆಯಾಗಿದೆ. ಬಸ್ ಸೌಕರ್ಯದ ಕೊರತೆಯಿಂದ ಜನರು ಹೊರಗೆ ತೆರಳಲು ತೊಂದರೆಯಾದ ಕಾರಣ ಈ ಭಾಗದ ಜನತೆ ಅನಿವಾರ್ಯವಾಗಿ ದುಬಾರಿ ಹಣಕೊಟ್ಟು ಆಟೋರಿಕ್ಷಾದಲ್ಲಿ ತೆರಳುವ ಪರಿಸ್ಥಿತಿ ಬಂದಿದೆ ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ. ತಕ್ಷಣದಲ್ಲಿ ಗರ್ವಾಲೆ - ಸೂರ್ಲಬ್ಬಿ ಮಾರ್ಗದ ಮೂಲಕ ಸೋಮವಾರಪೇಟೆ ಕಡೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಗರ್ವಾಲೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಚಾಮೇರ ಪಳಂಗಪ್ಪ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದಾರೆ.

ಕಳೆದ ಎರಡು ದಿನಗಳಿಂದ ಬಿರುಸುಗೊಂಡು ಸುರಿಯುತ್ತಿರುವ ಮಳೆಯಿಂದ ಸೂರ್ಲಬ್ಬಿ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ.

ತೀವ್ರ ಮಳೆ ಗಾಳಿಗೆ ಮಾದಾಪುರದಿಂದ ಗರ್ವಾಲೆ ಮತ್ತು ಸೂರ್ಲಬ್ಬಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಮರಗಳು ರಸ್ತೆಗೆ ಅಡ್ಡಲಾಗಿ ಮುರಿದುಬಿದ್ದ ಕಾರಣ ಕೆಲವೊಮ್ಮೆ ವಾಹನ ಸಂಚಾರಕ್ಕೂ ವ್ಯತ್ಯಯವಾಗಿದೆ ಎಂದು ಕುಂಬಾರಗಡಿಗೆ ಗ್ರಾಮದ ಸೋಮಣ್ಣ ಹೇಳಿದರು. ಮಳೆ ಸಂದರ್ಭ ರಸ್ತೆಗೆ ಅಡ್ಡಲಾಗಿ ದಿಡೀರನೆ ಬಿದ್ದ ಮರಗಳನ್ನು ಸ್ಥಳೀಯರೇ ತಕ್ಷಣ ತೆರವುಗೊಳಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಾಧ್ಯವಾಗಿದೆ. ಈ ಮಾರ್ಗದಲ್ಲಿ ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಯಾವ ವೇಳೆಯಲ್ಲಿ ರಸ್ತೆಯಂಚಿನ ಮರಗಳು ನೆಲಕ್ಕುರುತ್ತವೆ ಎಂಬ ಭೀತಿಯಿಂದ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತೆರಳುವಂತಾಗಿದೆ ಎಂದು ಸೂರ್ಲಬ್ಬಿ ಗ್ರಾಮದ ಮುದ್ದಂಡ ನಾಣಿಯಪ್ಪ ತಿಳಿಸಿದರು.

ಮಳೆ ಸಂದರ್ಭದಲ್ಲಿ ಸೂರ್ಲಬ್ಬಿ ಸರ್ಕಾರಿ ಶಾಲೆಯ ಕಾಂಪೌಂಡ್ ಮತ್ತು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಗ್ರಾಮಸ್ಥರೇ ತೆರವುಗೊಳಿಸಿದರು.

ಮಳೆ ತೀವ್ರಗೊಂಡಿರುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದೆ. ಹೆಚ್ಚು ಮಳೆಯಿಂದ ರೈತರ ಕೃಷಿ ಫಸಲಿಗೆ ತೀವ್ರ ನಷ್ಟ ಉಂಟಾಗಿದೆ ಎಂದು ಮುಟ್ಲು ಗ್ರಾಮದ ಕೃಷಿಕ ನೇತ್ರು ತಿಳಿಸಿದರು. ಮಳೆಯಿಂದ ಬೆಳೆನಷ್ಟಗೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಮುದಾಯ ಕಂದಾಯ ಇಲಾಖೆಯನ್ನು ಒತ್ತಾಯಿಸಿದೆ.

ಸೂರ್ಲಬ್ಬಿ ಭಾಗದಲ್ಲಿ ಮಳೆ ತೀವ್ರಗೊಂಡ ಕಾರಣ ಸೂರ್ಲಬ್ಬಿ ಬಳಿಯ ಮೇದುರ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿ ಜಲಪಾತದಲ್ಲಿನ ಜಲಧಾರೆ ತನ್ನ ವೈಭವವನ್ನು ಹೆಚ್ಚಿಸಿಕೊಂಡಿದೆ.

ಮಳೆ ನಡುವೆಯೂ ಸೂರ್ಲಬ್ಬಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಶಾಲೆಯ ಹೊರ ಭಾಗದಲ್ಲಿ ಸರ್ಕಾರದ ವಿದ್ಯಾಗಮ ಕಾರ್ಯಕ್ರಮವನ್ನು ಗ್ರಾಮದ ಸಮುದಾಯ ಭವನ ಮತ್ತು ರಂಗಮಂದಿರ ಬಳಿ ನಡೆಸಲಾಗುತ್ತಿ ದ್ದುದು ಈ ಸಂದರ್ಭದಲ್ಲಿ ಕಂಡು ಬಂತು. ಮಳೆ ನಡುವೆಯೂ ಮಕ್ಕಳು ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.