ವೀರಾಜಪೇಟೆ, ಆ. 20: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇದೆ; ರಾಜ್ಯ ವರಿಷ್ಠರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.

ಇಲ್ಲಿನ ದರ್ಶನ್ ಸಭಾಂಗಣದಲ್ಲಿ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರುಗಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ಹೊರ ಹಾಕಿದರು.

ಹಲವಾರು ನಾಯಕರುಗಳು ಪಕ್ಷ ಬಿಟ್ಟು ಹೋಗಿದ್ದಾರೆ. ಅವರನ್ನು ಕರೆತರುವಲ್ಲಿ ಪಕ್ಷಕ್ಕೆ ಆಗುತ್ತಿಲ್ಲ ಇದೇ ರೀತಿ ಮುಂದುವರೆದರೆ ಇನ್ನೂ ಕೆಲವರು ಪಕ್ಷ ಬಿಡುವ ಚಿಂತನೆಯಲಿ ್ಲದ್ದಾರೆ. ನಾವುಗಳು ಸಭೆಗೆ ಜನರ ಕರೆದುಕೊಂಡು ಬರುವ ಕೆಲಸ ಮಾತ್ರ ಆಗುತ್ತಿದೆ. ನಮ್ಮ ಅಹವಾಲುಗಳನ್ನು ಗಣನೆಗೆ ತಗೆದುಕೊಳ್ಳುತ್ತಿಲ್ಲ. ಮುಂದಿನ ತಿಂಗಳು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ ಪಕ್ಷಕ್ಕೆ ಒಂದು ಸೀಟು ಲಭಿಸುವ ವಿಶ್ವಾಸ ಇಲ್ಲ. ಬ್ಲಾಕ್ ಅಧ್ಯಕ್ಷ ಹಾಗೂ ನಾಯಕರುಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಚಂಬೆಬೆಳ್ಳೂರು ವಲಯ ಅಧ್ಯಕ್ಷ ಮೇಕತಂಡ ರಘು ಅಸಮಾಧಾನ ಹೊರ ಹಾಕಿದರು.

ಇದಕ್ಕೆ ಉತ್ತರಿಸಿದ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ ಈಗಾಗಲೇ ಅವರೊಂದಿಗೆ ಮಾತಾಡಿದ್ದೇನೆ. ಬ್ಲಾಕ್ ಅಧ್ಯಕ್ಷರ ಮೇಲೆ ಅಸಮಾಧಾನ ಇಲ್ಲ ಜಿಲ್ಲಾಧ್ಯಕ್ಷರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ನಿಲುವು ಹಾಗೂ ಅಸಮಾಧಾನವನ್ನು ವರಿಷ್ಠರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಎಂ.ಎಲ್‍ಸಿ ವೀಣಾ ಅಚ್ಚಯ್ಯ ಮಾತನಾಡಿ ಜಿಲ್ಲಾಧ್ಯಕ್ಷರ ನಡೆಯ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇದೆ. ಅವರು ಹಿಂದೆ ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡಿ ದ್ದಾರೆ. ಜಿಲ್ಲೆಯ ವಿದ್ಯಾಮಾನಗಳನ್ನು ರಾಜ್ಯ ವರಿಷ್ಠರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಿದರು.

ಜನ ವಿರೋಧಿ ನೀತಿ : ಖಂಡನೆ

ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರುಗಳು ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರುಗಳು. ದೇವರಾಜು ಅವರ ಅಧಿಕಾರವಧಿಯಲ್ಲಿ ತಂದಂತಹ ಅನೇಕ ಜನಪರ ಕಾಯಿದೆಗಳನ್ನು ರಾಜ್ಯ ಸರ್ಕಾರ ಇಂದು ರದ್ದು ಗೊಳಿಸುತ್ತಿದೆ. ಅದರಲ್ಲಿ ಭೂ ಸುಧಾರಣಾ ಕಾಯಿದೆ ಕೂಡ ಒಂದಾಗಿದೆ. ಇಂತಹ ಜನ ವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ವೀಣಾ ಅಚ್ಚಯ್ಯ ತಮ್ಮ ಭಾಷಣದಲ್ಲಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸುತ್ತಿದೆ ಎಂಬ ಸಂಶಯ ಹಲವರಲ್ಲಿ ಇದೆ. ಮುಂದೇನು ಎಂಬ ಜಿಜ್ಞಾಸೆಯೂ ಇದೆ. ಯಾವುದೇ ಸಂಶಯ ಬೇಡ. ಇಂದಿನ ರಾಜ್ಯ ಸರಕಾರದ ಜನರ ವಿರೋಧಿ ನೀತಿಗಳಿಂದಾಗಿ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಎಲ್ಲರೂ ಒಟ್ಟಾಗಿ ಮುಂದಿನ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ವಿಧಾನ ಪರಿಷತ್‍ನ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ 17 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕಿದೆ. ಹಸಿರು ಕ್ರಾಂತಿ ಮತ್ತು ಆಹಾರ ಕ್ರಾಂತಿಯಿಂದ ನಾವು ಸ್ವಾವಲಂಬಿಗಳಾಗಿ ಪಾಶ್ಚಾತ್ಯ ರಾಷ್ಟ್ರಕ್ಕೆ ಆಹಾರ ದಾನ್ಯಗಳನ್ನು ರಫ್ತು ಮಾಡುವಂತಹ ಪರಿಸ್ಥಿತಿ, ರಾಷ್ಟ್ರದಲ್ಲಿ ಪ್ರತಿಯೊಂದನ್ನು ಕಂಪ್ಯೂಟರಿಕರಣ ಮತ್ತು ಡಿಜಿಟಲಿಕರಣ ಮಾಡಿ ಹೊಸ ಕ್ರಾಂತಿಯನ್ನು ಮಾಡಿರುವುದು ಕಾಂಗ್ರೆಸ್ ಪಕ್ಷ. ಸುಮಾರು 624 ಬೃಹತ್ ಅಣೆಕಟ್ಟನ್ನು ಕಟ್ಟುವುದರ ಮೂಲಕ ನೀರು ಸಂಗ್ರಹಣಾ ಕ್ರಾಂತಿಯನ್ನು ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸರಾ ಚಂಗಪ್ಪ ಮಾತನಾಡಿ, ದೇವರಾಜು ಅರಸು ಅವರು ಕೇವಲ ಹಿಂದುಳಿದ ವರ್ಗಗಳ ನಾಯಕ ಮಾತ್ರ ಆಗಿರಲಿಲ್ಲ. ಸಾಮಾನ್ಯ ಶೋಷಿತ ವರ್ಗಗಳ ನಾಯಕರೂ ಆಗಿದ್ದರು. ಭೂ ಸುಧಾರಣಾ ಕಾಯಿದೆ ಸೇರಿದಂತೆ ಹಲವಾರು ಜನಪರ ಕಾಯಿದೆಗಳನ್ನು ಪರಿಚಯಿಸಿ ಜನಧ್ವನಿ ಆಗಿದ್ದರು ಎಂದು ಹೇಳಿದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಲ್ಯಮೀದೇರಿರ ನವೀನ್, ಕೆಪಿಸಿಸಿ ಮಾಜಿ ಸದಸ್ಯೆ ತಾರಾ ಅಯ್ಯಮ್ಮ, ಪರಿಶಿಷ್ಟ ವಿಭಾಗದ ಅಧ್ಯಕ್ಷ ವಿ.ಕೆ. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.