ಕೂಡಿಗೆ, ಆ. 20: ಕೋವಿಡ್ - 19 ರ ಹಿನ್ನೆಲೆಯಲ್ಲಿ ಸರ್ಕಾರ ಈ ವರ್ಷ ಅದ್ಧೂರಿ ಗಣೇಶೋತ್ಸವದ ಬದಲಿಗೆ ಸರಳವಾಗಿ ಸಾಂಪ್ರಾದಾಯಿಕ ಗಣೇಶೋತ್ಸವ ಆಚರಣೆಗೆ ಸೂಚನೆ ನೀಡಿರುವ ಹಿನ್ನೆಲೆ ಕೊಡಗಿನ ತೊರೆನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ಪರಿಸರ ಹಾಗೂ ಆರೋಗ್ಯ ಸ್ನೇಹಿ ಅರಶಿಣ ಗಣೇಶ : 2020 ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಆಶ್ರಯದಲ್ಲಿ ಹಸಿರೆಡೆಗೆ ನಮ್ಮ ನಡೆ ( ಗೋ ಗ್ರೀನ್ ಅಭಿಯಾನ) ಎಂಬ ಘೋಷಣೆಯಡಿ ನಡೆದ ಪರಿಸರ ಸ್ನೇಹಿ ಗಣೇಶೋತ್ಸವ ಜನಜಾಗೃತಿ ಅಭಿಯಾನದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ಕುಮಾರ್, ಪರಿಸರ ಸ್ನೇಹಿ ಅರಶಿಣ ಗಣೇಶೋತ್ಸವ- 2020ರ ಕುರಿತ ಮಾಹಿತಿ ಪತ್ರ ಮತ್ತು ಸ್ಟಿಕರ್ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಮುಖ್ಯ ಶಿಕ್ಷಕ ಕುಮಾರ್, ಕೋವಿಡ್ -19ರ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲರೂ ಮನೆಯಲ್ಲಿಯೇ ಪರಿಸರ ಸ್ನೇಹಿ ಅರಿಶಿಣದ ಗಣೇಶನ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸುವ ಮೂಲಕ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ವಿಜ್ಞಾನ ಶಿಕ್ಷಕಿ ಬಿ.ಪಿ.ಸವಿತ , ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವ ತಿಳಿಸಿದರು. ಇಕೋ ಕ್ಲಬ್‍ನ ಶಿಕ್ಷಕ ಜಿ. ಶ್ರೀಹರ್ಷ, ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಪರಿಸರ ಕಾರ್ಯಕರ್ತ ಟಿ.ವಿ.ಸಾಗರ್ ತೊರೆನೂರು ಅವರು ತಾವು ತಯಾರಿಸಿದ ಜೇಡಿಮಣ್ಣಿನ ಗಣೇಶ ಮತ್ತು ಅರಿಶಿಣ ಗಣೇಶನ ಮೂರ್ತಿ ಬಗ್ಗೆ ವಿವರಿಸಿದರು.

ಶಿಕ್ಷಕರಾದ ಟಿ.ಬಿ. ಮಂಜುನಾಥ್, ಎಸ್.ಕೆ. ಪ್ರಸನ್ನ, ಜಯಲಕ್ಷ್ಮಿ, ಪ್ರವೀಣ್ ಕುಮಾರ್, ಶೈಲಾ ಸೇರಿದಂತೆ ಪೆÇೀಷಕರು ಪಾಲ್ಗೊಂಡಿದ್ದರು.